ಮುಂದಿನ ವರ್ಷದಲ್ಲಿ ಹೆಚ್ಚುವರಿ ಆದಾಯ ಬಜೆಟ್ ಮಂಡನೆ: ಸಿಎಂ ಸಿದ್ದರಾಮಯ್ಯ ಭರವಸೆ

Update: 2025-03-13 20:24 IST
ಮುಂದಿನ ವರ್ಷದಲ್ಲಿ ಹೆಚ್ಚುವರಿ ಆದಾಯ ಬಜೆಟ್ ಮಂಡನೆ: ಸಿಎಂ ಸಿದ್ದರಾಮಯ್ಯ  ಭರವಸೆ
  • whatsapp icon

ಬೆಂಗಳೂರು : ಮುಂದಿನ ವರ್ಷದಿಂದ ರಾಜ್ಯದಲ್ಲಿ ಹೆಚ್ಚುವರಿ ಅದಾಯದ (ರೆವಿನ್ಯೂ ಸರ್ ಪ್ಲಸ್) ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ವಿರೋಧಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, 4.09 ಲಕ್ಷ ಕೋಟಿ ಗಾತ್ರದ ಬಜೆಟ್‍ನಲ್ಲಿ 3.11 ಲಕ್ಷ ಕೋಟಿ ರೂ. ರಾಜಸ್ವ ವೆಚ್ಚವನ್ನು ನಿಗದಿ ಮಾಡಲಾಗಿದೆ. ಇದು ಶೇ.76 ರಷ್ಟಿದ್ದರೆ ಬಂಡವಾಳ ವೆಚ್ಚಕ್ಕೆ ಕೇವಲ 17.4 ರಷ್ಟು ಮೀಸಲಿಡಲಾಗಿದೆ. 11.36 ಸಾವಿರ ಕೋಟಿ ಬಂಡವಾಳ ವೆಚ್ಚದಲ್ಲಿ ಯಾವ ಆಸ್ತಿ ಸೃಜನೆ ಮಾಡಲು ಸಾಧ್ಯ, ಸಾಲ ಮರುಪಾವತಿಗಾಗಿ 26,470 ಕೋಟಿ ರೂ. ಮೀಸಲಿಡಲಾಗಿದೆ. 19 ಸಾವಿರ ಕೋಟಿ ರಾಜಸ್ವ ಕೊರತೆಯಿದೆ. ರಾಜ್ಯದ ಒಟ್ಟು ಸಾಲ 7.64 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ವಿವರಿಸಿದರು.

ಸಾಲ ಪಡೆದು ಆಸ್ತಿ ಸೃಷ್ಟಿಸಬೇಕೆಂದು 2017 ರಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಭಾಷಣ ಮಾಡಿದ್ದರು. ಆನಂತರ ಸಿದ್ದರಾಮಯ್ಯ ನವರೂ ನಿರಾಸ ಆಗಿದ್ದಾರೆ. ಅವರ ಬಜೆಟ್ ಕೂಡ ನಿರಾಸವಾಗಿದೆ. ಈಗ ಸಾಲ ಮಾಡಿ ಅವರ ರಾಜಕೀಯ ಪ್ರಣಾಳಿಕೆಯ ಈಡೇರಿಕೆಗೆ ಖರ್ಚು ಮಾಡುತ್ತಿದ್ದಾರೆ. ಎಲ್ಲ ಉಚಿತ ಕೊಡಲು ಸಾಲದ ಹಣ ದುರ್ಬಳಕೆಯಾಗುತ್ತಿದ್ದು ಇದು ಮೋಸ ಮತ್ತು ಅನ್ಯಾಯ ಎಂದು ಆರೋಪಿಸಿದರು.

ಅಭಿವೃದ್ಧಿ ಎಂಬುದು ಶೂನ್ಯವಾಗಿದೆ ಎಂದು ಆರ್.ಅಶೋಕ್ ಹೇಳುತ್ತಿದ್ದಂತೆ, ಸಚಿವ ಚಲುವರಾಯಸ್ವಾಮಿ ಪ್ರತಿ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ದೊರೆಯುತ್ತಿದೆ. ಇದು ಅಭಿವೃದ್ಧಿಯಲ್ಲವೇ? ಎಂದು ಪ್ರಶ್ನಿಸಿದರು.

ಆಗ ಅಶೋಕ್, ಸಾಲದ ಮೊತ್ತವನ್ನೂ ಕಳೆದ ವರ್ಷ 1.81 ಲಕ್ಷ ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ ಅಷ್ಟು ಸಂಗ್ರಹವಾಗಿಲ್ಲ, ಮುಂದಿನ ವರ್ಷದಲ್ಲಿ 2.8 ಲಕ್ಷ ಕೋಟಿ ರೂ. ಆದಾಯದ ಗುರಿ ನಿಗದಿಪಡಿಸಲಾಗಿದೆ. ಅಭಿವೃದ್ಧಿ ಗುರಿಗಿಂತ ಅಬಕಾರಿ ಗುರಿ ಹೆಚ್ಚಾಗಿದೆ. ಜನರನ್ನು ಮದ್ಯಪಾನ ಪ್ರಿಯರನ್ನಾಗಿ ಮಾಡಲಾಗುತ್ತಿದೆ. 16ನೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ, ತುಂಬಾ ದುರ್ಬಲರಾಗಿದ್ದಾರೆ. ಮರ ಮುಪ್ಪಾದರೂ ಹುಳಿ ಮುಪ್ಪೇ? ಎಂಬ ಗಾದೆ ಮಾತು ಸಿದ್ದರಾಮಯ್ಯ ನವರಿಗೆ ಅನ್ವಯವಾಗುವುದಿಲ್ಲ ಎಂದು ಲೇವಡಿ ಮಾಡಿದರು.

ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯನವರು ಕೇಂದ್ರ ಸರಕಾರ ಎಷ್ಟು ಸಾಲ ಮಾಡಿದೆ ಎಂಬುದನ್ನೂ ಹೇಳಬೇಕು. ಸಾಲದ ಹಣವನ್ನು ಆಸ್ತಿ ಸೃಜನೆಗೆ ಖರ್ಚು ಮಾಡಬೇಕು ಎಂಬ ಹೇಳಿಕೆಗೆ ಈಗಲೂ ಬದ್ಧ. ಅಲ್ಲದೆ, ರೆವಿನ್ಯೂ ಸರ್‌ ಪ್ಲಸ್ ಒಂದನ್ನು ಹೊರತುಪಡಿಸಿ ಉಳಿದಂತೆ ವಿತ್ತೀಯ ಕೊರತೆ ಮತ್ತು ಸಾಲದ ಪ್ರಮಾಣ ಎರಡೂ ನಿಯಮಾವಳಿಗಳ ಅನುಸಾರದಲ್ಲಿಯೇ ಇವೆ ಎಂದರು.

ಇನ್ನೂ, ಕಳೆದ ವರ್ಷ 27 ಸಾವಿರ ಕೋಟಿ ವಿತ್ತೀಯ ಕೊರತೆ ಇತ್ತು. ಈ ವರ್ಷ 19,262 ಕೋಟಿ ರೂ.ಗೆ ಇಳಿಸಲಾಗಿದೆ. ಮುಂದಿನ ವರ್ಷ ಹೆಚ್ಚುವರಿ ಆದಾಯದ ಬಜೆಟ್ ಮಂಡನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News