ಪಂಚಾಯತ್ ಚುನಾವಣೆಯಲ್ಲಿ ಗೆಲ್ಲದವರು, ತಮಿಳುನಾಡಿನಿಂದ ಬಂದವರು ನಮಗೆ ಪಾಠ ಮಾಡ್ತಾರೆ: ಸ್ವಪಕ್ಷ ನಾಯಕರ ವಿರುದ್ಧ ರೇಣುಕಾಚಾರ್ಯ ಕಿಡಿ
'''ಈಶ್ವರಪ್ಪ, ಜಗದೀಶ್ ಶೆಟ್ಟರ್ ಎಲ್ಲರನ್ನು ಮುಗಿಸಿಬಿಟ್ರಲ್ಲ. ಬಸವರಾಜ ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ ಆಗಿದ್ರು. ಆದರೆ ಅವರ ಎರಡು ಕೈಗಳನ್ನು ಕಟ್ಟಿ ಹಾಕಿದರು''
ಬೆಂಗಳೂರು : ''ಗ್ರಾಮ ಪಂಚಾಯತ್ ಚುನಾವಣೆ ಗೆಲ್ಲದವರು ನಮಗೆ ಪಾಠ ಮಾಡ್ತಾರೆ, ತಮಿಳುನಾಡಿನಿಂದ ಅಣ್ಣಾಮಲೈ ಬಂದು ನಮಗೆ ಮಾರ್ಗದರ್ಶನ ಕೊಡ್ತಾರೆ. ನಾವೇನು ಇಲ್ಲಿರುವವರೆಲ್ಲ ಕುರಿಗಳಾ?'' ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಪಕ್ಷ ನಾಯಕರ ವಿರುದ್ಧವೇ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಈಶ್ವರಪ್ಪ, ಜಗದೀಶ್ ಶೆಟ್ಟರ್ ಎಲ್ಲರನ್ನು ಮುಗಿಸಿಬಿಟ್ರಲ್ಲ. ಬಸವರಾಜ ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ ಆಗಿದ್ರು. ಆದರೆ ಅವರ ಎರಡು ಕೈಗಳನ್ನು ಕಟ್ಟಿ ಹಾಕಿದರು' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ಹೋದ ಮೇಲೆ ಅದನ್ನು ಮತಗಳಾಗಿ ಪರಿವರ್ತನೆ ಮಾಡುವ ಮುಖಗಳು ಬೇಕಲ್ವಾ? ಎಂದು ಪ್ರಶ್ನಿಸಿದ ಅವರು, ಬಸವರಾಜ ಬೊಮ್ಮಾಯಿಯವರೇ ಡಾ ಕೆ ಸುಧಾಕರ್ ಸೋತಾಗ ಅವರ ಮನೆಗೆ ಹೋಗಿ ಸಾಂತ್ವನ ಹೇಳಿಬಂದ್ರಿ. ಬೇರೆ ಯಾರೂ ಸೋತ ಅಭ್ಯರ್ಥಿಗಳು ಕಾಣಲಿಲ್ವಾ? ಎಂದು ಕಿಡಿಕಾರಿದರು.
''ಬಿಜೆಪಿ ಕಚೇರಿಯಲ್ಲಿ ಕೆಲವರು ಬರೀ ಕತ್ತರಿ ಹಾಕೋದೇ ಕೆಲಸವಾಗಿದೆ. ಯಾರು ಮಾತಾಡ್ತಾರೆ ಅವರನ್ನು ಮುಗಿಸೋದು, ಸೋತಮೇಲೆ ಯಡಿಯೂರಪ್ಪ ನಮ್ಮನ್ನು, ವಿಜಯೇಂದ್ರ ಕರೆದು ಮಾತಾಡಿದ್ರು. ಆದರೆ ನಮ್ಮ ಜೊತೆಗೆ ಬೇರೆಯವರು ಸೌಜನ್ಯಯುತವಾಗಿ ಮಾತಾಡಿಲ್ಲ. ರಾಜ್ಯಾಧ್ಯಕ್ಷರಾದವರು ಒಂದು ಸಾರಿ ಆದರೂ ಮಾತಾಡಿದ್ರಾ?'' ಎಂದು ಅವರು ಪ್ರಶ್ನಿಸಿದರು.