ಮೈಸೂರು ದಸರಾ ಕುಸ್ತಿ ಪಂದ್ಯಾವಳಿ: ಸೆ.20ಕ್ಕೆ ಆಯ್ಕೆ ಪ್ರಕ್ರಿಯೆ ಆರಂಭ
ಬೆಂಗಳೂರು, ಸೆ. 17: ಕರ್ನಾಟಕ ಕುಸ್ತಿ ಸಂಘ ಹಾಗೂ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಮೈಸೂರಿನ ದಸರಾ ಕ್ರೀಡಾಕೂಟದಲ್ಲಿ ನಡೆಯಲಿರುವ ‘ಸಿ.ಎಂ. ಕಪ್-2023 ಕುಸ್ತಿ ಚಾಂಪಿಯನ್‍ಶಿಪ್' ಆಯ್ಕೆ ಪ್ರಕ್ರಿಯೆಗೆ ಕರ್ನಾಟಕದ ಕುಸ್ತಿ ಪಟುಗಳನ್ನು ಆಹ್ವಾನಿಸಲಾಗಿದೆ.
ಸೆ.20ರಂದು ಮೈಸೂರಿನ ಚಾಮುಂಡಿ ವಿಹಾರ ಒಳಕ್ರೀಡಾಂಗಣದಲ್ಲಿ ಕರ್ನಾಟಕದ ಹಿರಿಯರ ವಿಭಾಗದ ಪುರುಷರ ಹಾಗೂ ಮಹಿಳೆಯರ ಫ್ರೀ ಸ್ಟೈಲ್ ಗ್ರಿಕೋರೋಮನ್ ಹಾಗೂ ಮಹಿಳಾ ವಿಭಾಗದ ಆಯ್ಕೆ ಪ್ರಕ್ರಿಯೆ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಬಿ.ಗುಣರಂಜನ್‍ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕರ್ನಾಟಕದ ಕುಸ್ತಿಪಟುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸೈನ್ಯ, ರೈಲ್ವೆ, ಪೊಲಿಸ್ ಇಲಾಖೆ ಸೇರಿ ಎಲ್ಲ ಸರಕಾರಿ ಇಲಾಖೆಯ ಕುಸ್ತಿಪಟುಗಳಿಗೆ ಮುಕ್ತ ಅವಕಾಶವಿರುತ್ತದೆ. ಅಂದು ಬೆಳಗ್ಗೆ 8ಗಂಟೆಯಿಂದ 9ಗಂಟೆಯ ವರೆಗೆ ದೇಹತೂಕ ಮಾಪನ ಮಾಡಲಾಗುತ್ತದೆ. ನಂತರ, 10 ಗಂಟೆಗೆ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ.
ಕುಸ್ತಿ ಪಟುಗಳು ಮೂಲ ಆಧಾರ್ ಕಾರ್ಡ್ ಜೊತೆಗೆ ನಕಲು ಪ್ರತಿ ಹಾಗೂ ಆಯಾ ಇಲಾಖೆಯಿಂದ ಅನುಮತಿ ಪತ್ರ, ಬ್ಯಾಂಕ್ ಖಾತೆ ವಿವರ ಸೇರಿದಂತೆ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಕಡ್ಡಾಯವಾಗಿ ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ: 98457 27392ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕುಸ್ತಿ ಸಂಘ ಪ್ರಕಟನೆಯಲ್ಲಿ ತಿಳಿಸಿದೆ.