ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಸಚಿವ ಸಂತೋಷ್ ಲಾಡ್
ಹೊಸಪೇಟೆ, ಆ. 6: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬದ್ದವಾಗಿದೆ. ಈ ಬಗ್ಗೆ ವಿಪಕ್ಷಗಳು ಏನೇ ಗೇಲಿ ಮಾಡಿದರೂ ಸರಕಾರವು ಜನಪರ ಕಾರ್ಯಕ್ರಮಗಳ ಅನುಷ್ಠಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸ್ಪಷ್ಟಪಡಿಸಿದರು.
ರವಿವಾರ ಹೊಸಪೇಟೆಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸರಕಾರದ ಐದನೆಯ ಗ್ಯಾರಂಟಿ ಕಾರ್ಯಕ್ರಮವಾಗಿರುವ ‘ಯುವನಿಧಿ' ಜಾರಿಯ ವಿಚಾರದಲ್ಲಿ ಸರಕಾರಕ್ಕೆ ಸ್ಪಷ್ಟತೆ ಇದೆ. ಇದೇ ಆರ್ಥಿಕ ವರ್ಷದಲ್ಲಿ ಪದವಿ ಹೊಂದಲಿರುವ ಯುವ ಜನಾಂಗದ ಮಾಹಿತಿಯನ್ನು ಸರಕಾರ ಕ್ರೋಢೀಕರಿಸುತ್ತಿದೆ. ಹೀಗಾಗಿ ‘ಯುವನಿಧಿ' ಜಾರಿಯ ವಿಚಾರದಲ್ಲಿ ಯಾರಿಗೂ ಅನುಮಾನ ಬೇಡ ಎಂದರು.
ಸಚಿವರ ಮತ್ತು ಶಾಸಕರ ನಡುವೆ ಹಗ್ಗಜಗ್ಗಾಟ ಎಂಬುದು ಸಂಪೂರ್ಣ ವಾಸ್ತವವಲ್ಲ. ಸರಕಾರ ಜಾರಿಗೊಳಿಸಿರುವ ಜನಪರ ಕಾರ್ಯಕ್ರಮಗಳನ್ನು ಚರ್ಚಿಸುವುದು ಬಿಟ್ಟು ಕೆಲವರು, ಸಣ್ಣ ಪುಟ್ಟ ಸಮಸ್ಯೆಗಳನ್ನೆ ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ನಾವು ಜನರ ಆಶೋತ್ತರಗಳ ಈಡೇರಿಸುವಲ್ಲಿ ಚಿತ್ತ ನೆಟ್ಟಿದ್ದೆವೆ. ಅವುಗಳ ಜಾರಿಗಾಗಿ ಬದ್ದತೆಯನ್ನು ಪ್ರದರ್ಶಿಸಿದ್ದೇವೆ ಎಂದು ಸಂತೋಷ್ ಲಾಡ್ ಹೇಳಿದರು.
ಈ ಸಂಧರ್ಭದಲ್ಲಿ ಹೊಸಪೇಟೆ ಶಾಸಕ ಎಚ್.ಆರ್.ಗವಿಯಪ್ಪ, ಸಂಡೂರು ಶಾಸಕ ಈ.ತುಕಾರಾಂ, ಕಾಂಗ್ರೆಸ್ ಪಕ್ಷದ ಮುಖಂಡರಾದ ಎಚ್.ಜಿ.ಗುರುದತ್, ಎಚ್.ಎನ್.ಎಫ್.ಇಮಾಮ್, ಗುಜ್ಜಲ ನಾಗರಾಜ ಉಪಸ್ಥಿತರಿದ್ದರು.