ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ನ.17 ರ ಗಡುವು

Update: 2023-09-06 13:17 GMT

 ಡಾ.ಕಮಲ್ಜೀತ್ ಸೋಯಿ- ರಸ್ತೆ ಸುರಕ್ಷತಾ ಮಂಡಳಿಯ ಸದಸ್ಯ

ಬೆಂಗಳೂರು, ಸೆ.6: ಮಾಲಕರು ತಮ್ಮ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ HSRP (ಅತಿ ಸುರಕ್ಷಿತ ನೋಂದಣಿ ಫ‌ಲಕ )  ಅಳವಡಿಕೆ ಮಾಡಲು ನ.17ರ ವರೆಗೆ ಅವಕಾಶವನ್ನು ನೀಡಿದ್ದು, ಸುರಕ್ಷತೆಯ ದೃಷ್ಟಿಯಿಂದ ಪ್ರತಿ ವಾಹನದ ಮಾಲಕರು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರಕಾರದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿಯ ಸದಸ್ಯ ಡಾ.ಕಮಲ್ಜೀತ್ ಸೋಯಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು 34 ಕೋಟಿಗೂ ಹೆಚ್ವು ನಕಲಿ ನಂಬರ್ ಪ್ಲೇಟ್ ವಾಹನಗಳು ಓಡಾಡುತ್ತಿದೆ. ಇದರಿಂದ ದೇಶದಲ್ಲಿ ಶೇ.99 ಅಪಘಾತಗಳು ನಡೆಯುತ್ತಿದೆ ಎಂದರು.

ದೇಶದಲ್ಲಿ ಒಟ್ಟು 18 ರಾಜ್ಯಗಳಲ್ಲಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‍ಗಳನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆ. ಉಳಿದ ರಾಜ್ಯಗಳು ಅಳವಡಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ. ಅಧಿಕೃತವಾಗಿಲ್ಲದ ವಾಹನಗಳು ರಸ್ತೆಗಳಲ್ಲಿ ಓಡಾಡುವುದನ್ನು ಪತ್ತೆ ಹಚ್ಚಲು ಈ ನಂಬರ್ ಪ್ಲೇಟ್ ಅಳವಡಿಕೆಯಿಂದ ಸಹಾಯವಾಗಲಿದೆ ಎಂದರು.

ಸರಕಾರ ಮತ್ತು ಮಾಧ್ಯಮಗಳಲ್ಲಿ ಈ ನಂಬರ್ ಪ್ಲೇಟ್ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ಜನರಿಗೆ ಅರಿವು ಮೂಡಿಸಲು ಮುಂದಾಗಬೇಕು. ನಂಬರ್ ಪ್ಲೇಟ್ ಖರೀದಿಸಲು 400 ರೂ.ಗಳನ್ನು ಕೇಂದ್ರ ಸರಕಾರವು ನಿಗದಿ ಮಾಡಿದೆ. https://www.siam.in/ ಜಾಲತಾಣದಲ್ಲಿ ನಂಬರ್ ಪ್ಲೇಟ್ ನೋಂದಣಿಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದರು.

ರಾಜ್ಯ ಸರಕಾರ ಈ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳುಲು ಮೂರು ತಿಂಗಳು ಗಡುವು ನೀಡಿದ್ದು, ಇಷ್ಟು ಕಡಿಮೆ ಸಮಯಾವಕಾಶ ಆಗುವುದಿಲ್ಲ. ಕನಿಷ್ಟ ಒಂದು ವರ್ಷದ ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದರು.

ಚ್‌ಎಸ್‌ಆರ್‌ಪಿ ಅಳವಡಿಕೆ ಕಡ್ಡಾಯ

ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವಂತೆ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯವು 2001ರಲ್ಲೇ ಆದೇಶ ಹೊರಡಿಸಿತ್ತು. ಆದರೆ, ಆಗ ಎಚ್‌ಎಸ್‌ಆರ್‌ಪಿ ಅಳವಡಿಕೆ ಕಡ್ಡಾಯಗೊಳಿಸಿರಲಿಲ್ಲ. ದೇಶದ ಭದ್ರತೆ ದೃಷ್ಟಿಯಿಂದ 2018 ರಲ್ಲಿ ಹೊಸ ಆದೇಶ ಹೊರಡಿಸಿದ ಕೇಂದ್ರ ಸರಕಾರ 2019ರ ಎ.1ರ ನಂತರ ನೋಂದಣಿಯಾಗುವ ಎಲ್ಲಾ ವಾಹನಗಳಿಗೂ ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ಅಳವಡಿಸಬೇಕೆಂದು ಸೂಚಿಸಿತ್ತು.

 

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News