ರೇಣುಕಾಸ್ವಾಮಿ ಕೊಲೆ ಪ್ರಕರಣ | ಸೆ.30ರವರೆಗೆ ನಟ ದರ್ಶನ್‌ ನ್ಯಾಯಾಂಗ ಬಂಧನ ವಿಸ್ತರಣೆ

Update: 2024-09-17 13:20 GMT

ನಟ ದರ್ಶನ್

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಸೇರಿ 17 ಮಂದಿ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆ.30ರವರೆಗೆ ವಿಸ್ತರಿಸಿ ನಗರದ 24ನೆ ಎಸಿಎಂಎಂ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ.

ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಸೆ.17ರ ಮಂಗಳವಾರಕ್ಕೆ ಅಂತ್ಯವಾದ ಹಿನ್ನೆಲೆ ಆರೋಪಿಗಳೆಲ್ಲರನ್ನೂ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ಸರಕಾರಿ ಪರ ವಕೀಲರು, ಪ್ರಕರಣಕ್ಕೆ ಸಂಬಂಧಪಟ್ಟ ತಾಂತ್ರಿಕ ಸಾಕ್ಷ್ಯಾಧಾರಗಳು ಹಾಗೂ ಸಿಎಫ್‍ಎಸ್‍ಎಲ್ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು.

ವಾದ ಆರಂಭಿಸಿದ ದರ್ಶನ್ ಪರ ವಕೀಲ, ಬಳ್ಳಾರಿ ಜೈಲಿನಲ್ಲಿ ತಮ್ಮ ಕಕ್ಷಿದಾರರಿಗೆ ಕನಿಷ್ಠ ಮೂಲಸೌಕರ್ಯಗಳನ್ನೂ ಒದಗಿಸಿಲ್ಲ. ಸರಿಯಾಗಿ ಕುಳಿತುಕೊಳ್ಳುವುದಕ್ಕೆ ಕುರ್ಚಿ ನೀಡಿಲ್ಲ. ಕುಟುಂಬದ ಆಪ್ತ ಸ್ನೇಹಿತರಿಗೆ ಭೇಟಿಗೆ ಅನುಮತಿ ನೀಡುತ್ತಿಲ್ಲ. ಪತ್ನಿ ಹಾಗೂ ಸಹೋದರರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಕೂಡಾ ಭೇಟಿಗೆ ಅನುವು ಮಾಡಿಕೊಡುತ್ತಿಲ್ಲ ಎಂದರು.

ಕಾರಾಗೃಹ ಇಲಾಖೆಯ ಡಿಐಜಿ, ನ್ಯಾಯಾಧೀಶರ ಮನವಿವಿಲ್ಲದೇ ಮೆಮೊ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಹೈ ಸೆಕ್ಯೂರಿಟಿ ಕಾರಣ ನೀಡಿದ್ದಾರೆ. ದೇಶ ವಿರೋಧಿ ಅಥವಾ ಕೋಕಾ ಪ್ರಕರಣಗಳಲ್ಲಿ ದರ್ಶನ್ ಬಂಧನವಾಗಿಲ್ಲ. ಎನ್‍ಐಎ ಪ್ರಕರಣಗಳಲ್ಲಿನ ಆರೋಪಿಗಳಿಗೆ ಕುರ್ಚಿ ವ್ಯವಸ್ಥೆ ಕಲ್ಪಿಸಲಾಗಿದೆ. ಹತ್ಯೆ ಪ್ರಕರಣದ ಆರೋಪಿ ದರ್ಶನ್‍ಗೆ ಕುರ್ಚಿ ಕಲ್ಪಿಸಿಲ್ಲ ಎಂದು ಎಂದು ನ್ಯಾಯಾಧೀಶರಿಗೆ ಮಾಹಿತಿ ನೀಡಿದರು.

ಈ ಬಗ್ಗೆ ಜೈಲಾಧಿಕಾರಿಗಳನ್ನು ಪ್ರಶ್ನಿಸಿದ ನ್ಯಾಯಾಧೀಶರು ಕುಟುಂಬದ ಸ್ನೇಹಿತರಿಗೆ ಭೇಟಿ ಮಾಡಲು ಅವಕಾಶ ಕೊಡಿ ಎಂದು ತಿಳಿಸಿದರು. ಜೊತೆಗೆ, ಅಗತ್ಯ ವಸ್ತುಗಳನ್ನು ಒದಗಿಸುವಂತೆ ಸೂಚಿಸಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆ.30ರವರೆಗೆ ವಿಸ್ತರಿಸಿ ಆದೇಶಿಸಿದರು.

ಇದೇ ವೇಳೆ ಪ್ರಕರಣದ 10ನೇ ಆರೋಪಿ ವಿನಯ್ ಬಳಸುತ್ತಿದ್ದ ಮೊಬೈಲ್ ಅನ್ನು ಹೆಚ್ಚುವರಿ ಸಾಕ್ಷ್ಯ ಸಂಗ್ರಹ ಹಿನ್ನೆಲೆಯಲ್ಲಿ ಎಫ್‍ಎಸ್‍ಎಲ್‍ಗೆ ಕಳುಹಿಸಿಕೊಡಲು ಕೇಳಿದ ಅನುಮತಿಗೆ ನ್ಯಾಯಾಧೀಶರು ಸಮ್ಮತಿ ಸೂಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News