ಸಂಚಾರ ಸಮಸ್ಯೆ ನಿಯಂತ್ರಿಸಲು ಅಧಿಕಾರಿಗಳು ರಸ್ತೆಗಿಳಿದು ಕೆಲಸ ಮಾಡಬೇಕು : ಜಿ.ಪರಮೇಶ್ವರ್

Update: 2024-07-06 10:45 GMT

ಬೆಂಗಳೂರು : ಬೆಂಗಳೂರು ನಗರದ ಸಂಚಾರ ಸಮಸ್ಯೆಯನ್ನು ನಿಯಂತ್ರಿಸಲು ಅಧಿಕಾರಿಗಳು ಪ್ರತಿದಿನ ರಸ್ತೆಗಿಳಿದು ಕೆಲಸ ಮಾಡಬೇಕು ಎಂದು ಗೃಹ ಸಚಿವ ಡಾ.‌ ಜಿ.ಪರಮೇಶ್ವರ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಪ್ರಧಾನ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಅಧಿಕಾರಿಗಳೊಂದಿಗೆ ಅವರು ಮಾತನಾಡಿದರು.

ಬೆಂಗಳೂರು ನಗರದಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಹೊಸ ಯೋಜನೆಗಳನ್ನು ರೂಪಿಸಬೇಕು. ಎಸಿಪಿ, ಇನ್‌ಸ್ಪೆಕ್ಟರ್‌ಗಳು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕನಿಷ್ಠ ಎರಡು ತಾಸು ಆದರೂ ರಸ್ತೆಯಲ್ಲಿ ನಿಂತು ಕೆಲಸ ಮಾಡಬೇಕು ಎಂದರು.

ಅನೇಕ ಸಲ ಖಾಸಗಿ ಕಾರಿನಲ್ಲಿ ಸಂಚರಿಸದಾಗ ಗಮನಿಸಿದ್ದೇನೆ. ಅಧಿಕಾರಿಗಳು ರಸ್ತೆಗಿಳಿದು ಕೆಲಸ ಮಾಡುವುದು ಕಾಣಿಸುವುದೇ ಇಲ್ಲ. ಇದನ್ನು ಸರಿಪಡಿಸಿಕೊಳ್ಳದೇ ಹೋದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು‌.

ಇ-ಬೀಟ್ ವ್ಯವಸ್ಥೆ ಸರಿಪಡಿಸಿ : ರಾಜ್ಯದಲ್ಲಿ ಅನೇಕ ಠಾಣೆಗಳಿಗೆ ಭೇಟಿ ನೀಡಿ, ಪರಿಶೀಲಿಸಿದಾಗ ಶೇ.70ರಷ್ಟು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಇ-ಬೀಟ್ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ. ಬೀಟ್ ಸಿಬ್ಬಂದಿಯ ಲೋಕೇಷನ್ ಮಾತ್ರ ಸಿಗುತ್ತದೆ. ಆತ ಕರ್ತವ್ಯದ ವೇಳೆ ಕೈಗೊಂಡ ಚಟುವಟಿಕೆಗಳ ಮಾಹಿತಿ ಅಧಿಕಾರಿಗಳ ಬಳಿ ಇರುವುದಿಲ್ಲ. ಇದನ್ನು ಯಾವ ರೀತಿ ಯಶಸ್ವಿ ಗೊಳಿಸುತ್ತೀರೋ ಗೊತ್ತಿಲ್ಲ. ಇ-ಬೀಟ್ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳದೇ ಹೋದರೆ, ಇಲಾಖೆಯ ಗುಣ್ಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಬೀಟ್ ಕರ್ತವ್ಯದ ಬಗ್ಗೆ ಡೈರಿಯಲ್ಲಿ ಬರೆದಿಡುವ ಹಳೇ ವ್ಯವಸ್ಥೆಗೆ ಹಿಂದಿರುಗಬೇಕೆ? ಎಂದು ಪ್ರಶ್ನಿಸಿದರು.

ಫೇಕ್‌ನ್ಯೂಸ್ ಬಿಸಿ ಮುಟ್ಟಿಸಿ: ಸುಳ್ಳು ಸುದ್ದಿ ಹಬ್ಬಿಸುವುದು ಹಚ್ಚಾಗುತ್ತಿದೆ. ಸರಕಾರ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ವಿರುದ್ಧ ಅವಾಚ್ಯವಾಗಿ, ತಿರುಚಿದ ಹೇಳಿಕೆಗಳನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಸಾಮಾನ್ಯ ಜನರ ವಿರುದ್ಧವು ಆಗುತ್ತಿದೆ. ಅಂತವರನ್ನು ಕೂಡಲೇ ಪತ್ತೆಹಚ್ಚಿ, ಬಿಸಿ ಮುಟ್ಟಿಸುವ ಕೆಲಸವಾಗಬೇಕು. ಇಂತಹ ತಪ್ಪುಗಳನ್ನು ಮತ್ತೊಬ್ಬರು ಮಾಡಲು ಮುಂದಾಗಬಾರದು. ತ್ವರಿತಗತಿಯಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸುವ ಕೆಲಸ ಆಗಬೇಕು ಎಂದು ತಾಕೀತು ಮಾಡಿದರು.

ಮಾದಕ ದ್ರವ್ಯ ಮುಕ್ತ ಕರ್ನಾಟಕ, ಪರಿಣಾಮಕಾರಿಯಾಗಿ ಕೆಲಸ‌ ಮಾಡಿ :

ಮಾದಕ ದ್ರವ್ಯ ಮುಕ್ತ ಕರ್ನಾಟಕದ ನಿಟ್ಟಿನಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ‌ ಮಾಡಬೇಕು. ಮಾದಕ ದ್ರವ್ಯ ಚಟುವಟಿಕೆಗಳಲ್ಲಿ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಹಿಡಿದು ಜೈಲಿಗೆ ಕಳುಹಿಸಿದರೆ ಸಾಲುವುದಿಲ್ಲ. ಮೂಲ ಆರೋಪಿಯನ್ನು ಪತ್ತೆ ಹಚ್ಚಬೇಕು. ಶಾಲಾ-ಕಾಲೇಜುಗಳಿಗೆ ಹೋಗಿ ಮಾದಕ ದ್ರವ್ಯ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು‌. ಇಂತಹ ಅಭಿಯಾನ ಕಾರ್ಯಕ್ರಮಗಳನ್ನು ನಡೆಸಲು ಖಾಸಗಿ ಕಂಪನಿಗಳು ಮುಂದೆ ಬರುತ್ತಿವೆ. ಅವರೊಂದಿಗೆ ಕೈಜೋಡಿಸಿ ಎಂದು ಸೂಚಿಸಿದರು.

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ತನಿಖೆಯಲ್ಲಿ ಕೆಳಹಂತದ ಅಧಿಕಾರಿ‌ ಮತ್ತು ಸಿಬ್ಬಂದಿಗಳು ಆರಂಭದಲ್ಲಿ ಬುದ್ಧಿವಂತಿಕೆಯಿಂದ ಕೆಲಸ ಮಾಡಿದ್ದರ ಪರಿಣಾಮವಾಗಿ ಶಂಕಿತರನ್ನು ಪತ್ತೆಹಚ್ಚಲು ಸಹಕಾರಿಯಾಯಿತು. ಶಂಕಿತ ಧರಿಸಿದ್ದ ಟೋಪಿಯನ್ನು ಆಧರಿಸಿ ಮೂಲ ಪತ್ತೆಹಚ್ಚಿರುವುದಕ್ಕೆ ಗೃಹ ಸಚಿವ ಪರಮೇಶ್ವರ ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಝೀರ್ ಅಹ್ಮದ್, ಸರಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ, ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News