2028ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಒಗ್ಗೂಡಿ ಕೆಲಸ: ಶ್ರೀರಾಮುಲು

ಮಾಜಿ ಸಚಿವ ಬಿ. ಶ್ರೀರಾಮುಲು
ಬೆಂಗಳೂರು: 2028ರಲ್ಲಿ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಿದೆ. ಇದಕ್ಕಾಗಿ ಬೆಲೆ ಏರಿಕೆ ಸೇರಿದಂತೆ ಈ ಸರಕಾರ ಮಾಡಿದ ಘನಂದಾರಿ ಕೆಲಸಗಳನ್ನು ಜನರ ಮುಂದಿಡಲು ಬಿಜೆಪಿ ಯೋಜಿಸಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2028ರಲ್ಲಿ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ. ಈ ಕುರಿತು ರಾಜ್ಯಾಧ್ಯಕ್ಷರಾದ ವಿಜಯೇಂದ್ರ, ಹಿರಿಯರಾದ ಯಡಿಯೂರಪ್ಪ ಅವರ ಜೊತೆ ಮಾತನಾಡಿದ್ದೇವೆ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಮಾಡುತ್ತೇವೆ ಎಂದು ವಿವರಿಸಿದರು.
ನನ್ನ ಪಕ್ಷ ನನ್ನ ತಾಯಿ ಇದ್ದಂತೆ ಎಂಬ ಚಿಂತನೆ ನನ್ನದು. ಕಾಂಗ್ರೆಸ್ ಸರಕಾರದಲ್ಲಿ ಅಭಿವೃದ್ಧಿ ಕೆಲಸಗಳು ನಿಂತ ನೀರಾಗಿವೆ ಎಂದರು.
ಯತ್ನಾಳ್ ವಿಚಾರದಲ್ಲಿ ಪಕ್ಷವು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಮಾಡಲಿದೆ ಎಂದು ಪ್ರತಿಕ್ರಿಯಿಸಿದರು.
ಬೆಲೆ ಏರಿಕೆ ವಿರುದ್ಧ ಎಪ್ರಿಲ್ 2ರಿಂದ ಜನಾಕ್ರೋಶ, ಜನಾಂದೋಲನ ಕಾರ್ಯಕ್ರಮಗಳ ಕುರಿತು ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ತಿಳಿಸಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಿಗೆ ಜನಾಕ್ರೋಶ ಆಂದೋಲನವನ್ನು ಹಂತಗಳಲ್ಲಿ ಒಯ್ಯುವ ಕುರಿತು ಅವರು ಮಾಹಿತಿ ನೀಡಿದ್ದಾರೆ ಎಂದರು.
ರಾಯಚೂರಿನಲ್ಲಿ ಐಐಟಿ ಬೇಕೆಂದು ಜನರು ಆಕ್ರೋಶದಿಂದ ಧರಣಿ ನಡೆಸುತ್ತಿದ್ದಾರೆ. ರೈತರು ಬೆಂಬಲ ಬೆಲೆಗೆ ಆಗ್ರಹಿಸಿ ಹೋರಾಟಗಳನ್ನು ಆರಂಭಿಸಿದ್ದಾರೆ. ರಾಯಚೂರಿನಲ್ಲಿ ಐಐಟಿ ವಿಚಾರದಲ್ಲಿ ಶಿವನಗೌಡರ ಜೊತೆಗೂಡಿ ದೆಹಲಿಗೆ ನಿಯೋಗ ತೆರಳಿ ಕೇಂದ್ರಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.