ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧ: ಕಪ್ಪು ಪಟ್ಟಿ ಧರಿಸಿ ಈದ್ ಪ್ರಾರ್ಥನೆಯಲ್ಲಿ ಭಾಗಿಯಾದ ಸಚಿವ ಝಮೀರ್ ಅಹ್ಮದ್

ಬೆಂಗಳೂರು: ಸೋಮವಾರ ಇಲ್ಲಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ನಡೆದ ಈದುಲ್ ಫಿತ್ರ್ ಸಾಮೂಹಿಕ ಪ್ರಾರ್ಥನೆಯಲ್ಲಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಭಾಗವಹಿಸಿದರು.
ಇದೇ ವೇಳೆ ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಮಸೂದೆ 2024 ಅನ್ನು ವಿರೋಧಿಸಿ ಸಚಿವ ಝಮೀರ್ ಅಹ್ಮದ್ ಖಾನ್ ತಮ್ಮ ತೋಳಿಗೆ ಕಪ್ಪು ಪಟ್ಟಿ ಧರಿಸಿ ನಮಾಝ್ ಮಾಡಿದರು. ಅವರ ಪುತ್ರ ಜೈದ್ ಝಮೀರ್ ಸೇರಿ ಅವರ ನೂರಾರು ಬೆಂಬಲಿಗರು ಕಪ್ಪು ಪಟ್ಟಿ ಧರಿಸಿ ಪ್ರಾರ್ಥನೆಯಲ್ಲಿ ಭಾಗವಹಿಸಿದರು.
ನಮಾಝ್ ಬಳಿಕ ಮಾತನಾಡಿದ ಸಚಿವರು, ನಮ್ಮ ಧಾರ್ಮಿಕ ಬೋಧಕರು ಪ್ರಾರ್ಥನೆಗಳನ್ನು ನಡೆಸಿದರು. ದುವಾ ಸಮಯದಲ್ಲಿ, ಮುಸ್ಲಿಮರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರು - ಎಲ್ಲಾ ಸಮುದಾಯಗಳು ಸಹೋದರ ಸಹೋದರಿಯರಂತೆ ಒಟ್ಟಿಗೆ ಬದುಕಲು ಒಗ್ಗಟ್ಟಿನಿಂದ ಪ್ರಾರ್ಥಿಸಿದೆ. ನಮ್ಮ ಧಾರ್ಮಿಕ ಮುಖ್ಯಸ್ಥರು ಅದಕ್ಕಾಗಿ ಪ್ರಾರ್ಥಿಸಿದರು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ವರ್ಷ ಬೆಳಿಗ್ಗೆ ಪ್ರಾರ್ಥನೆಗೆ ಹಾಜರಾಗುತ್ತಾರೆ. ಆದರೆ, ಈ ಬಾರಿ ಅನಾರೋಗ್ಯದಿಂದ ಅವರು ಬರಲು ಸಾಧ್ಯವಾಗಲಿಲ್ಲ. ಅವರು ಬೆಳಿಗ್ಗೆ 9.30 ಕ್ಕೆ ನನಗೆ ಕರೆ ಮಾಡಿ ಕಾರ್ಯಕ್ರಮದಲ್ಲಿ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಹಾಗೆಯೇ ಸಮುದಾಯದ ಸದಸ್ಯರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ನಮ್ಮ ಧಾರ್ಮಿಕ ಮುಖ್ಯಸ್ಥರು ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು ಎಂದು ಸಚಿವರು ಹೇಳಿದರು.
