ಆ್ಯಂಟಿ ಬಯೋಟಿಕ್ ಬಳಕೆ ಕುರಿತು ನೀತಿ ರಚನೆ : ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು : ರಾಜ್ಯ ವ್ಯಾಪಿ ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧಕ(ಎಂಎಂಆರ್) ಅನಗತ್ಯವಾಗಿ ಬಳಕೆ ಮಾಡುತ್ತಿರುವ ಕುರಿತು ಮಾಹಿತಿ ಇದ್ದು, ಈ ಸಂಬಂಧ ಬಳಕೆ ಕುರಿತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನೀತಿ ರಚನೆ ಮಾಡಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ವಿಶ್ವ ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧಕ ಜಾಗೃತಿ ಸಪ್ತಾಹ 2023 ಕುರಿತಂತೆ ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ್ಯಂಟಿ ಬಯೋಟಿಕ್ ಗಳ ಅತಿಯಾದ ಬಳಕೆ ಒಳ್ಳೆಯದಲ್ಲ. ದಿನೇ ದಿನೇ ಇದರ ಪ್ರಮಾಣ ಹೆಚ್ಚಾಗುತ್ತಿದ್ದು, ಅದರಲ್ಲೂ ಕೋಳಿ ಸಾಕಣೆ, ಪಶುಪಾಲನೆಗಳಲ್ಲಿ ಬಳಕೆ ಮಾಡಲಾಗುತ್ತಿದೆ ಎಂದರು.
ಉತ್ಪಾದನೆ ಹೆಚ್ಚು ಮಾಡುವ ಸಲುವಾಗಿ ಆ್ಯಂಟಿ ಬಯೋಟೆಕ್ ಗಳನ್ನು ಬಳಕೆ ಮಾಡುತ್ತಾರೆ. ಜತೆಗೆ, ಇದು ಸುಲಭವಾಗಿ ಜನರ ಕೈ ಸೇರುತ್ತಿದೆ. ಯಾವುದೇ ಮಾಹಿತಿ ಇಲ್ಲದೆ ಸಾರ್ವಜನಿಕರು ಸಹ ಸ್ವಯಂ ಚಿಕಿತ್ಸೆಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ವಾತಾವರಣ ಇಲ್ಲದಂತೆ ನಾವು ನೋಡಿಕೊಳ್ಳಬಹುದಾಗಿದೆ. ಈ ಬಗ್ಗೆ ಇಲಾಖೆ ವಿಶೇಷ ಕಾರ್ಯಕ್ರಮ ಹಾಕಿಕೊಂಡಿದ್ದು, ಕೃಷಿ ಒಳಗೊಂಡತೆ ಇತರೆ ಇಲಾಖೆಗಳೊಂದಿಗೆ ಸಭೆ ನಡೆಸಿ ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧಕ ಬಳಕೆ ಕುರಿತು ಒಂದು ನೀತಿ ರೂಪಿಸಬೇಕು ಎಂದು ಅವರು ಹೇಳಿದರು.
ನ.22ರಂದು ವಿಶ್ವ ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧಕ ಜಾಗೃತಿ ಸಪ್ತಾಹ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದು, ಈ ಬಾರಿ ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧವನ್ನು ಒಟ್ಟಾಗಿ ತಡೆಗಟ್ಟೋಣ ಘೋಷ ವಾಕ್ಯದಡಿ ಆಚರಣೆ ಮಾಡಲಾಗುತ್ತಿದೆ. ಇನ್ನೂ, ಎಎಂಆರ್ ಪ್ರಮಾಣದಿಂದಾಗಿ ಮರಣ ಪ್ರಮಾಣ ಅಧಿಕವಾಗುತ್ತಿದೆ. ಅನಾರೋಗ್ಯವೂ ಹೆಚ್ಚಾಗುತ್ತಿದ್ದು, ಹೀಗಾಗಿ, ಬಳಕೆ ಕುರಿತು ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ದಿನೇಶ್ ಗುಂಡೂರಾವ್ ಹೇಲಿದರು.