ಮಣಿಪುರ ಘಟನೆ ವೇಳೆ ಕರ್ನಾಟಕದಲ್ಲಿ ರೋಡ್ ಶೋ ನಡೆಸುತ್ತಿದ್ದ ಪ್ರಧಾನಿ ಮೋದಿ: ದಿನೇಶ್ ಗುಂಡೂರಾವ್ ಕಿಡಿ

Update: 2023-07-21 05:18 GMT

ಬೆಂಗಳೂರು: ''ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿರುವ ಕೃತ್ಯಕ್ಕೆ ಸುಪ್ರೀಂ ಕೋರ್ಟ್ ಹಾಕಿರುವ ಛೀಮಾರಿ, ಕೇಂದ್ರದ ನಿಷ್ಕ್ರಿಯತೆಗೆ ಹಿಡಿದ ಕೈಗನ್ನಡಿ. ಈ ಹೇಯ ಕೃತ್ಯ ನಡೆಯಲು ಅಲ್ಲಿನ ರಾಜ್ಯ ಸರ್ಕಾರದ ಎಷ್ಟು ಪಾಲಿದೆಯೋ ಕೇಂದ್ರದ ಪಾಲೂ ಅಷ್ಟೇ ಇದೆ. ಮಣಿಪುರದ ಗಲಭೆಯನ್ನು ಆರಂಭದಲ್ಲೇ ನಿಯಂತ್ರಿಸಿದ್ದರೆ ಈ ಘಟನೆ ನಡೆಯುತಿತ್ತೆ?'' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಈ ಸಂಬಂಧ ಶುಕ್ರವಾರ ಟ್ವೀಟ್ ಮಾಡಿರುವ ಅವರು, ''ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿದ್ದು ಮೇ 4 ರಂದು.ಆಗ ನಮ್ಮ ಘನವೆತ್ತ ಪ್ರಧಾನಿ ಮೋದಿ ರೋಡ್ ಶೋ ಮಾಡಲು ಕರ್ನಾಟಕದಲ್ಲಿದ್ದರು. ಇದಕ್ಕೂ ಮೊದಲೇ ಮಣಿಪುರದಲ್ಲಿ ಗಲಭೆ ಪ್ರಾರಂಭವಾಗಿತ್ತು. ಮೋದಿಯವರಿಗೆ ಚುನಾವಣಾ ಪ್ರಚಾರದಲ್ಲಿ ಇದ್ದ ಆಸಕ್ತಿ ಮಣಿಪುರದ ಗಲಭೆ ಬಗ್ಗೆ ಇದ್ದಿದ್ದರೆ ಇಂತಹ ಹೇಯ ಕೃತ್ಯ ತಡೆಯಬಹುದಿತ್ತಲ್ಲವೆ.?'' ಎಂದು ಪ್ರಶ್ನಿಸಿದ್ದಾರೆ. 

''ಮಣಿಪುರದ ಘಟನೆ ವಿಶ್ವದ ಮುಂದೆ ನಾವು ತಲೆತಗ್ಗಿಸುವಂತೆ ಮಾಡಿದೆ. ಇಂತಹ ಅಮಾನವೀಯ ಕೃತ್ಯಕ್ಕೆ ಈ ದೇಶ ಸಾಕ್ಷಿಯಾಗಿದ್ದು ಈ ನೆಲದ ದುರಂತ. BJPಯ ಫ್ಯಾಸಿಸ್ಟ್ ಮನಸ್ಸುಗಳು ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿದರ ಫಲವಿದು. ಮೋದಿಯವರೇ, ಈಗಲಾದರೂ ನೀವು ನಿಮ್ಮ ಪರಿವಾರದವರು ಮನಸ್ಸು ಬದಲಾಯಿಸಿಕೊಳ್ಳಿ. ಪ್ರೀತಿ ಹಂಚಲು ಪ್ರಯತ್ನಿಸಿ'' ಎಂದು ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News