ಗ್ರಾ.ಪಂ. ವ್ಯಾಪ್ತಿಯ ಸುಮಾರು 90 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು ವಿತರಿಸಲು ಪ್ರಿಯಾಂಕ್ ಖರ್ಗೆ ಸೂಚನೆ

Update: 2025-01-13 13:58 GMT

 ಪ್ರಿಯಾಂಕ್ ಖರ್ಗೆ

ಬೆಂಗಳೂರು : ಗ್ರಾಮೀಣ ಪ್ರದೇಶಗಳಲ್ಲಿನ ಆಸ್ತಿಗಳ ನೋಂದಣಿಗೆ ಕಂದಾಯ ಇಲಾಖೆಯು ಇ-ಸ್ವತ್ತು ಕಡ್ಡಾಯಗೊಳಿಸಿರುವುದರಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಾಕಿ ಇರುವ ಸುಮಾರು 90 ಲಕ್ಷ ಆಸ್ತಿಗಳಿಗೆ ಕಾಲಮಿತಿಯೊಳಗೆ ಇ-ಸ್ವತ್ತು ವಿತರಣೆ ಮಾಡಿ, ಆಸ್ತಿ ತೆರಿಗೆ ಸಂಗ್ರಹ ಅಭಿಯಾನವನ್ನು ಕೈಗೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ (ಪಂಚಾಯತ್ ರಾಜ್) ಉಮಾ ಮಹದೇವನ್ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಇನ್ನು ಮುಂದೆ ಕಂದಾಯ ಜಮೀನಿನಲ್ಲಿ ಬಡಾವಣೆ ನಿರ್ಮಾಣಕ್ಕೆ ಅವಕಾಶ ನೀಡದಿರಲು ಸೂಚಿಸಿದರಲ್ಲದೆ, ಹೊಸ ಬಡಾವಣೆಗಳ ನಿರ್ಮಾಣವನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಖಾತಾ ಇಲ್ಲದ ಬಹಳಷ್ಟು ಆಸ್ತಿಗಳ ಸಂಬಂಧ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನ ಹಾಗೂ ಮನೆಗಳನ್ನು ನೋಂದಣಿ ಮಾಡುವ ಬಗ್ಗೆ ವರದಿಗಳು ಬರುತ್ತಿದ್ದು, ಇಂತಹ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು. ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತಿಗಳು ಮತ್ತು ನೋಂದಣಿ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಇಂತಹ ಪ್ರಕರಣಗಳನ್ನು ತಡೆಯಬೇಕೆಂದು ಅವರು ನಿರ್ದೇಶನ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಇ-ಸ್ವತ್ತು ವಿತರಣೆಗೆ ಸಂಬಂಧಿಸಿದಂತೆ ಜ.6ರಂದು ನೋಂದಣಿ ಮತ್ತು ಮುದ್ರಾಂಕ ವಿಷಯಗಳ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ಇಲಾಖೆಗಳ ಸಭೆ ನಡೆಸಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 90 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು ವಿತರಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿ ಅಭಿಯಾನದ ರೂಪದಲ್ಲಿ ನಿಯಮಬದ್ಧವಾದ ಆಸ್ತಿಗಳಿಗೆ ಇ-ಸ್ವತ್ತು ವಿತರಿಸುವ ಮೂಲಕ ತೆರಿಗೆ ಸಂಗ್ರಹ ಮಾಡುವಂತೆ ಸೂಚಿಸಿದ್ದರು.

ಅದರಂತೆ, ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ಮತ್ತು ಆಸ್ತಿ ತೆರಿಗೆ ಸಂಗ್ರಹಣೆ ಅಭಿಯಾನ ನಡೆಸಲು ಎಲ್ಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News