ಪಾಕ್ ಪರ ಘೋಷಣೆ ಆರೋಪ ಪ್ರಕರಣ ; ಮೂವರ ಬಂಧನ
ಬೆಂಗಳೂರು ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ವಿಧಾನಸೌಧ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹೊಸದಿಲ್ಲಿಯ ಮೂಲದ ಇಲ್ತಾಝ್, ಆರ್.ಟಿ.ನಗರದ ನಿವಾಸಿ ಮುನವ್ವರ್ ಹಾಗೂ ಹಾವೇರಿ ಜಿಲ್ಲೆ ಬ್ಯಾಡಗಿಯ ಮುಹಮ್ಮದ್ ಶಫಿ ನಾಶಿಪುಡಿ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಫೆ.27ರಂದು ರಾಜ್ಯಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ನಾಸಿರ್ ಹುಸೇನ್ ಪರವಾಗಿ ಬಂಧಿತ ಆರೋಪಿಗಳು ಪಾಸ್ ಮೂಲಕ ವಿಧಾನಸೌಧಕ್ಕೆ ಆಗಮಿಸಿದ್ದರು. ಸಂಜೆ 6ಗಂಟೆಯ ವೇಳೆಗೆ ನಾಸಿರ್ ಹುಸೇನ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಘೋಷಣೆ ಕೂಗಿದ್ದರು. ಈ ಸಂದರ್ಭದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಎನ್ನಲಾದ ವಿಡಿಯೊವೊಂದು ವೈರಲ್ ಆಗಿತ್ತು.
ಅನಂತರ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿ, ವಿಡಿಯೊ ಮಾದರಿಯನ್ನು ಎಫ್‍ಎಸ್‍ಎಲ್‍ಗೆ ರವಾನಿಸಲಾಗಿತ್ತು, ಮೇಲ್ನೋಟಕ್ಕೆ ವರದಿಯಲ್ಲಿ ಘೋಷಣೆ ಕೂಗಿರುವುದು ದೃಢವಾಗಿರುವ ಹಿನ್ನೆಲೆ ಸೋಮವಾರ ಸಂಜೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದರು.
ಬಳಿಕ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಇಲ್ಲಿನ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಘೋಷಣೆ ವೀಡಿಯೊ ತೀವ್ರ ಸ್ವರೂಪ ಪಡೆದುಕೊಂಡಿದ್ದ ಹಿನ್ನೆಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಘೋಷಣೆ ಕೂಗಿದ ಆರೋಪದಡಿ 26 ಮಂದಿಯ ಪಟ್ಟಿಯನ್ನ ಸಿದ್ದಪಡಿಸಲಾಗಿತ್ತು. ಇದರಲ್ಲಿ 7 ಮಂದಿ ವಿಚಾರಣೆ ಮಾಡಿ ಮೂವರ ಧ್ವನಿ ಮಾದರಿಗಳನ್ನು ಎಫ್‍ಎಸ್‍ಎಲ್‍ಗೆ ರವಾನೆ ಮಾಡಲಾಗಿತ್ತು. ಆನಂತರ, ದೃಢಪಟ್ಟ ಹಿನ್ನೆಲೆ ಮೂವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.