ಸಾರ್ವಜನಿಕರ ಹಿತದೃಷ್ಟಿಯಿಂದ ಹುಕ್ಕಾ ಸೇವನೆ‌ ನಿಷೇಧ ; ಹೈಕೋರ್ಟ್‌ಗೆ ರಾಜ್ಯ ಸರಕಾರ ಮಾಹಿತಿ

Update: 2024-03-06 16:29 GMT

ಬೆಂಗಳೂರು: ಸಾರ್ವಜನಿಕರ ಹಿತದೃಷ್ಟಿ, ಎಲ್ಲರ ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲಿ ಹುಕ್ಕಾ ಸೇವನೆಯನ್ನು ನಿಷೇಧಿಸಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಹುಕ್ಕಾ ನಿಷೇಧವನ್ನು ಪ್ರಶ್ನಿಸಿ ಆರ್‌.ಭರತ್‌ ಮತ್ತಿತರರು ಸಲ್ಲಿಸಿರುವ ರಿಟ್‌ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿತು. ವಿಚಾರಣೆ ಸಂದರ್ಭ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ ಶೆಟ್ಟಿ ವಾದ ಮಂಡಿಸಿ, ಬಾರ್‌ಗಳಲ್ಲಿ ಎಲ್ಲೆಡೆ ಹುಕ್ಕಾ ಸೇವನೆಗೆ ಅವಕಾಶ ನೀಡಲಾಗುತ್ತಿತ್ತು. ಅಲ್ಲದೆ ‌‌ಇವುಗಳಿಗೆ ಪ್ರತ್ಯೇಕ ಜಾಗವನ್ನು ನಿಗದಿ ಮಾಡಿರಲಿಲ್ಲ. ಇದು ಹುಕ್ಕಾ ಸೇವನೆ ಮಾಡುವವರು ಮಾತ್ರವಲ್ಲದೆ, ಇತರರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿತ್ತು. ಸರಕಾರ ಸಂವಿಧಾನದ 47ನೇ ವಿಧಿಯ ಅಡಿಯಲ್ಲಿ ತನ್ನ ಅಧಿಕಾರ ಚಲಾಯಿಸಿದೆ ಎಂದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಎಲ್ಲರ ಆರೋಗ್ಯದ ದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲಾ ಬಗೆಯ ಹುಕ್ಕಾ ಮಾರಾಟ, ಸೇವನೆ, ದಾಸ್ತಾನು, ಈ ಕುರಿತ ಜಾಹೀರಾತು ಮತ್ತು ಉತ್ತೇಜನೆಯನ್ನು ನಿಷೇಧಿಸಲಾಗಿದೆ. ಹುಕ್ಕಾ ನಿಷೇಧಿಸುವ ಮಸೂದೆಗೆ ಉಭಯ ಸದನಗಳು ಈಗಾಗಲೇ ಅನುಮೋದನೆ ನೀಡಿದೆ. ಸದ್ಯ ಈ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಬೇಕಿದೆ ಎಂದು ಹೇಳಿದರು.

ವಿಚಾರಣೆ ಮಾರ್ಚ್ 7 ಮುಂದುವರೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News