ಎಚ್‍ಡಿಕೆ ವಿರುದ್ಧ ಜಾರ್ಜ್‍ಶಿಟ್ ಸಲ್ಲಿಸಲು ಎಸ್‌ಐಟಿಯಿಂದ ರಾಜಭವನಕ್ಕೆ ಪ್ರಸ್ತಾವನೆ
ಬೆಂಗಳೂರು : ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲರ ಅನುಮತಿ ಬೆನ್ನಲ್ಲೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲೋಕಾಯುಕ್ತ ಪೊಲೀಸರು, ಜಾರ್ಜ್‍ಶಿಟ್ ಸಲ್ಲಿಸಲು ರಾಜಭವನ ಕದ ತಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಹಿಂದೆ ಎಚ್‍ಡಿಕೆ ಸಿಎಂ ಆಗಿದ್ದ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಕಾನೂನು ಬಾಹಿರವಾಗಿ ಸಾಯಿ ವೆಂಕಟೇಶ್ವರ ಮಿನರಲ್ಸ್ ಎಂಬ ಅಸ್ತಿತ್ವದಲ್ಲೇ ಇಲ್ಲದ ಕಂಪೆನಿಗೆ ಗಣಿಗಾರಿಕೆ ನಡೆಸಲು ನಿಯಮ ಮೀರಿ ಜಮೀನು ನೀಡಿದ್ದ ಆರೋಪ ಎದುರಿಸುತ್ತಿದ್ದು, ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ವಿಶೇಷ ತನಿಖಾ ತಂಡ(ಎಸ್‌ಐಟಿ) ಕುಮಾರಸ್ವಾಮಿ ವಿರುದ್ದ ದೋಷಾರೋಪ ಪಟ್ಟಿ ಸಲ್ಲಿಸಲು ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಿದೆ.
ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲರಿಗೆ ಕೋರಿದ್ದ ಪ್ರಸ್ತಾವನೆಗೆ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿಲ್ಲ ಎಂಬ ಆರೋಪ ಎದುರಾಗಿತ್ತು. ಕುಮಾರಸ್ವಾಮಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ, 1988ರಡಿ ಕಾನೂನು ಕ್ರಮಕ್ಕಾಗಿ, ಲೋಕಾಯುಕ್ತದ ವಿಶೇಷ ತನಿಖಾ ತಂಡದ ಎಡಿಜಿಪಿ ಚಂದ್ರಶೇಖರ್ ಖುದ್ದಾಗಿ ರಾಜ್ಯಪಾಲರಿಗೆ ಪತ್ರ ಬರೆದು ಅನುಮತಿ ನೀಡಲು ಕೋರಿದ್ದಾರೆ.