ಗೃಹ ಇಲಾಖೆಗೆ ವಿಶೇಷ ಅನುದಾನ ಕೋರಿ ಕೇಂದ್ರಕ್ಕೆ ಪ್ರಸ್ತಾವ : ಜಿ.ಪರಮೇಶ್ವರ್

Update: 2024-06-27 13:03 GMT

ಬೆಂಗಳೂರು : ಗೃಹ ಇಲಾಖೆಯನ್ನು ಆಧುನೀಕರಣಗೊಳಿಸಲು ವಿಶೇಷ ಅನುದಾನಕ್ಕಾಗಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗೃಹ ಇಲಾಖೆಯ ಕೆಲ ಯೋಜನೆಗಳು ಬಾಕಿ ಉಳಿದಿವೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಹೊಸದಿಲ್ಲಿಗೆ ಕರೆದಿದ್ದಾರೆ" ಎಂದು ಹೇಳಿದರು.

ಪೊಲೀಸ್ ಗೃಹ ಯೋಜನೆಯಡಿ 10 ಸಾವಿರ ಮನೆ ನಿರ್ಮಾಣ ಮಾಡಲಾಗಿದೆ. ರಾಜ್ಯ ಸರಕಾರವು ಶೇ.75ರಷ್ಟು ಪೊಲೀಸರಿಗೆ ಮನೆ ನಿರ್ಮಿಸಿಕೊಡುವ ಗುರಿ ಇಟ್ಟುಕೊಂಡಿದೆ. ಪ್ರಸ್ತುತ ಶೇ.40ರಷ್ಟು ಮನೆ ನಿರ್ಮಿಸಲಾಗಿದೆ. ಅಲ್ಲದೆ, ಇಲಾಖೆಯ ಆಧುನೀಕರಣಕ್ಕೆ ಅನುದಾನ ನೀಡುವಂತೆಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ರಾಜ್ಯಕ್ಕೆ ಬರಬೇಕಾದ ಅನುದಾನದ ಬಗ್ಗೆ ಸಿಎಂ, ಪ್ರಧಾನಿ ಭೇಟಿಗೆ ಸಮಯ ಕೇಳಿದ್ದು, ಅವರಿಗೂ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ಹೊಸದಿಲ್ಲಿಯಲ್ಲಿ ನಡೆಯಲಿರುವ ಸಭೆಗೆ ಕೇಂದ್ರದ ಎಲ್ಲ ಸಚಿವರನ್ನು ಹಾಗೂ ಎಲ್ಲ ಸಂಸದರನ್ನು ಆಹ್ವಾನಿಸಲಾಗಿದೆ. ರಾಜ್ಯದ ಸಮಸ್ಯೆಗಳನ್ನು ಗಮನಕ್ಕೆ ತರಬೇಕೆಂಬುದು ಉದ್ದೇಶ. ಸಭೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಭಿನಂದನೆ ತಿಳಿಸುತ್ತೇವೆ. ಎಚ್.ಡಿ. ಕುಮಾರಸ್ವಾಮಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದವರು. ರಾಜ್ಯದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಕೇಂದ್ರ ಸಚಿವರಾಗಿರುವುದರಿಂದ ರಾಜ್ಯಕ್ಕೆ ಹೆಚ್ಚು ಅನುದಾನ ಕೊಡಿಸುತ್ತಾರೆಂಬ ವಿಶ್ವಾಸವಿದೆ ಎಂದರು.

ಹೆಚ್ಚುವರಿ ಡಿಸಿಎಂ ನೇಮಕ ಜೊತೆಗೆ ಅಧ್ಯಕ್ಷರ ಬದಲಾವಣೆ ಕುರಿತು ಹೈಕಮಾಂಡ್ ಮುಂದೆ ಒತ್ತಾಯಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಣ್ಣ ಅವರು ಈ ಸಭೆಗೆ ಬರುತ್ತಿಲ್ಲ. ಬಂದಿದ್ದರೆ ಅವರು ಒತ್ತಾಯಿಸುತ್ತಿದ್ದರೋ ಎನೋ ಗೊತ್ತಿಲ್ಲ. ಈ ವಿಚಾರ ಹೈಕಮಾಂಡ್ ಬಿಟ್ಟಿದ್ದು. ಕೆಲವರು ಅವರ ಅಭಿಪ್ರಾಯ ಹೇಳುತ್ತಾರೆ. ಅದನ್ನು ತಪ್ಪು ಅಂತ ಯಾರು ಕೂಡ ಭಾವಿಸಬಾರದು. ಹೈಕಮಾಂಡ್ ಗಮನಿಸಿದರೆ ನಿರ್ಧಾರ ಮಾಡುತ್ತಾರೆ. ನಾವ್ಯಾರು ಅದರ ತೀರ್ಮಾನ ಮಾಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News