ಸಿಎಂ ರಾಜೀನಾಮೆಗೆ ಆಗ್ರಹ | ನಾಳೆ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿಯಿಂದ ಪ್ರತಿಭಟನೆ : ಸುನೀಲ್‍ ಕುಮಾರ್

Update: 2024-08-21 12:50 GMT

ವಿ.ಸುನೀಲ್ ಕುಮಾರ್

ಬೆಂಗಳೂರು : ರಾಜ್ಯಪಾಲರಿಗೆ ಅವಮಾನ ಮಾಡಿದ ಕಾಂಗ್ರೆಸ್ ಕ್ರಮವನ್ನು ಖಂಡಿಸಿ ಹಾಗೂ ಹಗರಣಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ನಾಳೆ(ಆ.22) ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ. ರಾಜ್ಯ ಕೋರ್ ಕಮಿಟಿ ಸದಸ್ಯರು, ಸ್ಥಳೀಯ ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆ ಸಂದರ್ಭದಲ್ಲಿ ರಾಜ್ಯಪಾಲರ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ. ಅಲ್ಲದೆ, ಕೆಲವೆಡೆ ಭಾವಚಿತ್ರವನ್ನು ದಹಿಸಲಾಗಿದೆ. ಇದಲ್ಲದೆ, ಸಚಿವರಾದ ಝಮೀರ್ ಅಹ್ಮದ್, ಕೃಷ್ಣಬೈರೇಗೌಡ, ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಮೊದಲಾದವರು ರಾಜ್ಯಪಾಲರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಕೊಟ್ಟಿದ್ದಾರೆ ಎಂದು ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ, ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಮಾತನಾಡಿದ್ದಾರೆ. ಹಿಂಸೆಗೆ ಪ್ರಚೋದಿಸುವ ಹೇಳಿಕೆಗಳನ್ನು ಕಾಂಗ್ರೆಸ್ಸಿಗರು ನೀಡುತ್ತಿದ್ದು, ಇದರ ವಿರುದ್ಧ ಪೊಲೀಸ್ ಇಲಾಖೆಯು ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಯಾವ ಮುಖಂಡರು ಎಲ್ಲಿ ಭಾಗವಹಿಸುತ್ತಾರೆ?: ತುಮಕೂರು-ಡಿ.ವಿ.ಸದಾನಂದಗೌಡ, ದಾವಣಗೆರೆ-ಬಸವರಾಜ ಬೊಮ್ಮಾಯಿ, ಚಿತ್ರದುರ್ಗ-ಗೋವಿಂದ ಕಾರಜೋಳ, ಮಂಡ್ಯ-ಆರ್.ಅಶೋಕ್, ಬೆಂಗಳೂರು-ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮತ್ತು ಛಲವಾದಿ ನಾರಾಯಣಸ್ವಾಮಿ, ಬಳ್ಳಾರಿ-ಬಿ.ಶ್ರೀರಾಮುಲು, ಚಿಕ್ಕಮಗಳೂರು-ಸಿ.ಟಿ.ರವಿ, ಮಂಗಳೂರು-ನಳಿನ್ ಕುಮಾರ್ ಕಟೀಲ್ ಭಾಗವಹಿಸುತ್ತಾರೆ. ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು ಆಯಾ ಜಿಲ್ಲೆಗಳಲ್ಲಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಸುನೀಲ್ ಕುಮಾರ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಆಂತರಿಕ ಸಮಸ್ಯೆ ಸರಿಮಾಡಿಕೊಳ್ಳಲು ಬಿಜೆಪಿ ಪ್ರತಿಭಟನೆ: ಡಿಸಿಎಂ

"ಬಿಜೆಪಿಯಲ್ಲಿ ಆಂತರಿಕ ಸಮಸ್ಯೆಯಿದೆ. ಅದನ್ನು ಸರಿ ಮಾಡಿಕೊಳ್ಳಲು ಈಗ ಮತ್ತೊಮ್ಮೆ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಪ್ರತಿಭಟನೆಯಲ್ಲಿ ಯಾವುದೇ ಹುರುಳಿಲ್ಲ. ಮುಡಾ ಅಕ್ರಮ ಎಂದು ಮೈಸೂರು ಚಲೋ ಮಾಡಿದರು. ಅದಕ್ಕೆ ಈಗಾಗಲೇ ನಾವು ಉತ್ತರ ಕೊಟ್ಟಿದ್ದೇವೆ. ಈಗ ಪ್ರತಿಭಟನೆ ಮಾಡುವವರನ್ನು ಬೇಡ ಎನ್ನಲು ಆಗುತ್ತದೆಯೇ?"

ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News