ಶಿರೂರು ಭೂಕುಸಿತ: ಶೋಧ ಕಾರ್ಯಾಚರಣೆ ಸಂದರ್ಭ ಮಾನವ ಮೂಳೆ ಪತ್ತೆ
ಕಾರವಾರ: ಶಿರೂರು ದುರಂತದಿಂದ ಗಂಗಾವಳಿಯಲ್ಲಿ ಮುಳುಗಿ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಡ್ರೆಜ್ಜಿಂಗ್ ಮೂಲಕ ಶೋಧ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಮಾನವ ಮೂಳೆ ಪತ್ತೆಯಾಗಿದೆ.
ಅಂಕೋಲಾ ತಾಲೂಕಿನ ಶಿರೂರು ಗುಡ್ಡಕುಸಿತ ಉಂಟಾಗಿ 75ದಿನ ಕಳೆದಿದ್ದು, ಮೂರನೇ ಹಂತದ ಕಾರ್ಯಚರಣೆಯಲ್ಲಿ ಲಾರಿ ಚಾಲಕ ಅರ್ಜುನ್ ಮೃತದೇಹ ಪತ್ತೆಯಾದ ಬೆನ್ನಲೇ ಇದೀಗ ವಿದ್ಯುತ್ ಟವರ್ ಸಿಕ್ಕಿರುವ ಸ್ಥಳದಲ್ಲೆ ಮೂಳೆ ಪತ್ತೆಯಾಗಿದೆ. ಯಾರಿಗೆ ಸೇರಿದ್ದು ಎನ್ನುವುದು ಡಿಎನ್ಎ ಪರೀಕ್ಷೆ ಬಳಿಕವೇ ಪತ್ತೆಯಾಗಬೇಕಿದೆ.
ಶಿರೂರು ಘಟನೆಯಲ್ಲಿ ಹನ್ನೊಂದು ಮಂದಿ ನಾಪತ್ತೆಯಾಗಿದ್ದರು. ಇದುವರೆಗೆ 9 ಜನರ ಮೃತದೇಹ ಪತ್ತೆಯಾಗಿದೆ. ಸ್ಥಳೀಯರಾದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಅವರ ಪತ್ತೆಗಾಗಿ ಮೂರನೇ ಹಂತದಲ್ಲಿ ಕಾರ್ಯಾಚರಣೆ ಮುಂದುವರಿಸಲಾಗಿದೆ. ಕಾರ್ಯಾಚರಣೆ ವೇಳೆ ಮೂಳೆಯೊಂದು ಪತ್ತೆಯಾಗಿದೆ.
ಕಳೆದ ಎರಡು ದಿನಗಳ ಹಿಂದೆ ವಿದ್ಯುತ್ ಟವರ್ ಪತ್ತೆಯಾಗಿತ್ತು. ಅದೇ ಸ್ಥಳದಲ್ಲಿ ಮೂಳೆ ಸಹ ಪತ್ತೆಯಾಗಿದೆ. ಇದೇ ಸ್ಥಳದಲ್ಲಿ ಆಲದ ಮರ ಸಹ ಸಿಲುಕಿಕೊಂಡಿದ್ದು, ಅದೇ ಆಲದ ಮರದ ಬಳಿ ಮೃತ ಲೋಕೇಶ ಹಾಗೂ ಜಗನ್ನಾಥ ಅವರ ಮೃತದೇಹ ಸಿಲುಕೊಂಡಿರಬಹುದು ಎಂದು ಅಂದಾಜಿಸಲಾಗಿತ್ತು. ಅಲ್ಲದೆ ಅದೇ ಸ್ಥಳದಲ್ಲಿ ಸಿಕ್ಕಿರುವ ಮೂಳೆ ಮನುಷ್ಯನದ್ದೇ ಆಗಿದೆ. ಆದರೆ ಅದು ಜಗನ್ನಾಥ ಅಥವಾ ಲೋಕೇಶನದ್ದೊ ಅಥವಾ ಕಳೆದ ನಾಲ್ಕು ದಿನಗಳ ಹಿಂದೆ ಪತ್ತೆಯಾದ ಅರ್ಜುನ್ ಮೂಳೆನಾ ಎನ್ನುವುದು ಡಿಎನ್ಎ ಪರೀಕ್ಷೆ ನಂತರಲ್ಲೇ ತಿಳಿದು ಬರಬೇಕಿದೆ.