ಶಿರೂರು ಗುಡ್ಡ ಕುಸಿತ ದುರಂತ| ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾಗಿದ್ದು ಪುರುಷನ ಮೂಳೆ: ಡಿಸಿ ಲಕ್ಷ್ಮೀಪ್ರಿಯಾ
ಕಾರವಾರ: ಶಿರೂರು ಗುಡ್ಡ ಕುಸಿತದ ದುರಂತದ ಬಳಿಕ ನಾಪತ್ತೆಯಾದವರ ಪತ್ತೆಗೆ ಶೋಧ ಕಾರ್ಯಾಚರಣೆ ಸಂದರ್ಭ ಪತ್ತೆಯಾದ ಮೂಳೆಯ ಡಿಎನ್ಎ ವರದಿ ಬಂದಿದ್ದು ಅದು ಮಾನವ ಪುರುಷ ಮೂಳೆಯಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಮಾಹಿತಿ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಾಧ್ಯಮದವರಿಗೆ ಮಾಹಿತಿ ನೀಡಿರುವ ಅವರು ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದ್ದ ಎರಡು ಮೂಳೆಗಳನ್ನು ಡಿಎನ್ಎ ಪರೀಕ್ಷೆಗಾಗಿ ಅ.3 ರಂದು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿತ್ತು. ಎರಡೂವರೆ ತಿಂಗಳ ಬಳಿಕ ವರದಿ ಬಂದಿದೆ. ವರದಿಯಲ್ಲಿ ಮೂಳೆಗಳು ಮನುಷ್ಯ ರದ್ದೇ ಆಗಿದ್ದು, ಪುರುಷರ ಮೂಳೆಗಳು ಎಂದು ತಿಳಿಸಲಾಗಿದೆ. ಆದರೆ ಯಾರದ್ದು ಎಂದು ಪತ್ತೆ ಮಾಡಲು ಆಗಿಲ್ಲ. ಎರಡೂ ಮೂಳೆಗಳು ಪ್ರತ್ಯೇಕ ದೇಹಗಳದ್ದು ಎಂದು ಕೂಡ ತಿಳಿಸಿಲ್ಲ. ಡಿಎನ್‌ಎ ಕಂಡುಹಿಡಿಯಲು ಆಗದಿರುವ ಬಗ್ಗೆ ಕಾರಣಗಳನ್ನು ಕೂಡ ವರದಿಯಲ್ಲಿ ತಿಳಿಸಿಲ್ಲ. ಇದೀಗ ಡಿಎನ್‌ಎ ವರದಿ ಬಂದ ಕಾರಣ ಅದರ ಮೂಲಕ ಮರಣ ಪ್ರಮಾಣಪತ್ರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಶಿರೂರು ದುರಂತದ ಸಂದರ್ಭದಲ್ಲಿ ಸ್ಥಳೀಯರಾದ ಶಿರೂರಿನ ಜಗನ್ನಾಥ ಹಾಗೂ ಗಂಗೇಕೊಳ್ಳದ ಲೋಕೇಶ್ ಎನ್ನುವವರ ಮೃತದೇಹ ಪತ್ತೆಯಾಗಿರಲಿಲ್ಲ. ಕೇರಳದ ಅರ್ಜುನ್ ಕಳೆಬರ ಪತ್ತೆಗೆ ಜಿಲ್ಲಾಡಳಿತ ಕೈಗೊಂಡ ಶೋಧ ಕಾರ್ಯಾಚರಣೆ ಮುಂದುವರಿಸಿದ ಸಂದರ್ಭದಲ್ಲಿ ಎರಡು ಪ್ರತ್ಯೇಕ ಮೂಳೆ ಒತ್ತೆಯಾಗಿದ್ದವು. ಮೂರು ತಿಂಗಳ ಬಳಿಕ ಡಿಎನ್ಎ ವರದಿ ಬಂದಿದ್ದು ಮಾನವ ಪುರುಷ ಮೂಳೆಯಾಗಿದ್ದರೂ ಸಹ ಯಾರದ್ದು ಎಂದು ಪತ್ತೆ ಮಾಡಲು ಸಾಧ್ಯವಾಗಿಲ್ಲ.