ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ತುಳಸಿ ಗೌಡ ನಿಧನ

Update: 2024-12-16 15:33 GMT

ಅಂಕೋಲಾ: ಲಕ್ಷಾಂತರ ಗಿಡಗಳನ್ನು ನೆಡುವ ಮೂಲಕ ವೃಕ್ಷಮಾತೆ ಎಂದೇ ಗುರುತಿಸಿಕೊಂಡಿದ್ದ ತಾಲೂಕಿನ ಹೊನ್ನಳ್ಳಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡ (86) ಅವರು ವಯೋಸಹಜ ಅನಾರೋಗ್ಯದಿಂದ ಸೋಮವಾರ ಸಂಜೆ 6 ಗಂಟೆಯ ಸುಮಾರಿಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.


ವರ್ಷಕ್ಕೆ ಮೂವತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ತುಳಸಿ ಗೌಡ ಅವರು ನೆಟ್ಟು ಬೆಳಸುತಿದ್ದರು. ಈವರೆಗೆ ಲಕ್ಷಾಂತರ ಗಿಡಗಳನ್ನು ಬೆಳಸಿ ಪಾಲನೆ ಮಾಡಿದ ಕೀರ್ತಿ ಇವರದ್ದಾಗಿದೆ.

ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡು ಇಬ್ಬರು ಮಕ್ಕಳನ್ನು ಸಾಕಲು ಅರಣ್ಯ ಇಲಾಖೆಯಲ್ಲಿ ದಿನಗೂಲಿ ಕೆಲಸಕ್ಕೆ ಸೇರಿದ ಅವರು ಅಲ್ಲಿಯೇ ಗಿಡಗಳ ಆರೈಕೆ, ಪೋಷಣೆ ಮಾಡುತ್ತಾ ಹಲವು ಕಾಡು ಗಿಡಗಳ ಬೀಜ ಸಂಗ್ರಹಿಸಿ ಸಸಿಗಳನ್ನು ಮಾಡಿ ಕಾಡಿನಲ್ಲಿ ನೆಡುವ ಮೂಲಕ ಹಸಿರು ಕ್ರಾಂತಿ ಮಾಡಿದರು.

ಅಳವಿನಂಚಿನ ಸಸ್ಯಗಳನ್ನು ಬೆಳಸಿದ ಕೀರ್ತಿ ಇವರದ್ದು, ಇವರ ಸಾಧನೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.ಇಬ್ಬರು ಮಕ್ಕಳು ಹಾಗೂ ನಾಲ್ಕು ಮೊಮ್ಮಕ್ಕಳನ್ನು ಅಗಲಿದ್ದಾರೆ.

ತುಳಸಿಗೌಡ ಅವರ ಬಗ್ಗೆ

ತಮ್ಮ ಇಳಿ ವಯಸ್ಸಿನಲ್ಲಿಯೂ ಪರಿಸರ ಪ್ರೇಮವನ್ನು ಮುಂದುರಿಸಿಕೊಂಡು ಬಂದಿದ್ದು ಇತರರಿಗೆ ಮಾದರಿಯಾಗಿದ್ದರು. ಜಿಲ್ಲೆಯಲ್ಲಿ ಇವರಿಗೆ ವೃಕ್ಷ ಮಾತೆ ಎಂದು ಗುರುತಿಸಲಾಗಿದೆ. ಲಾಭಗಳ ಅಪೇಕ್ಷೆ ಇಲ್ಲದೆ, ಯಾವ ಪ್ರತಿಫಲವನ್ನೂ ನಿರೀಕ್ಷಿ ಸದೆ ಕೇವಲ ಅರಣ್ಯದ ಮೇಲಿನ ಕಾಳಜಿಗಾಗಿ ಗಿಡ ಮರಗಳನ್ನು ಬೆಳೆಸುವುದರ ಮೂಲಕ ಬರಡಾಗುತ್ತಿರುವ ಕಾಡಿಗೆ ಹಸಿರು ಸೆರಗು ಹೊದಿಸುವ ಪರಿಸರ ಸಂರಕ್ಷಣೆಯ ಕಾರ್ಯವನ್ನು ಕಳೆದ ಸುಮಾರು ಆರು ದಶಕಗಳಿಂದ ಮಾಡುತ್ತ ಬಂದಿದ್ದರು ತುಳಸಿ ಗೌಡರು.

ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸಿಯಾಗಿರುವ ಹಾಲಕ್ಕಿ ಮಹಿಳೆ ತುಳಸಿಗೆ ಈಗ ಸುಮಾರು 86 ವರ್ಷ ವಯಸ್ಸು. ಚಿಕ್ಕ ವಯಸ್ಸಿನಲ್ಲಿಯೇ ಹಸೆಮಣೆ ಏರಿದ ಈಕೆಗೆ ಅರಣ್ಯ ಇಲಾಖೆಯ ಸಸಿ ನೆಡುವ ಕಾರ್ಯವೇ ಉದ್ಯೋಗದ ಜೊತೆಗೆ ಹವ್ಯಾಸವೂ ಆಗಿ ಪರಿಣಮಿಸಿತು. ಇಲಾಖೆಯವರು ನೀಡುವ ಕೆಲಸ ವಾರಕ್ಕೆ 5 ದಿನಗಳು ಮಾತ್ರವಾದರೂ ಉಳಿದ 2 ದಿನಗಳಲ್ಲಿಯೂ ಯಾವುದೇ ಕೂಲಿ ದೊರೆಯದಿದ್ದರೂ ತನ್ನ ಕಾರ್ಯವನ್ನು ಉಚಿತವಾಗಿ ಮಾಡುತ್ತಿದ್ದಳು. ನರ್ಸರಿಯಲ್ಲಿ ಬೀಜವನ್ನು ನೆಟ್ಟು ಅವು ಸಸಿಯಾದ ಬಳಿಕ ಬೋಳಾಗಿರುವ ಕಾಡಿನ ಪ್ರದೇಶಕ್ಕೆ ಒಯ್ದು ನೆಡುವ ಕಾರ್ಯದಲ್ಲಿ ತಮ್ಮ ಜೀನವನ್ನೇ ಸವೆದವರು. ಇವರ ದುಡಿಮೆ ಹಾಗೂ ಪ್ರಾಮಾಣಿಕ ಸೇವೆಯನ್ನು ಗಮನಿಸಿ ಅರಣ್ಯ ಇಲಾಖೆಯು ಇವರ ಸೇವೆಯನ್ನು ಖಾಯಂಗೊಳಿಸಿತು. ಖಾಯಂ ಆದ ಬಳಿಕ 14 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾದರು.

ವೃಕ್ಷ ಸಂಕುಲದ ಅಪಾರ ಜ್ಞಾನ

ತುಳಸಿ ಅವರ ವೃಕ್ಷಜ್ಞಾನ ಅಪಾರವಾಗಿತ್ತು. ಮುಖ್ಯವಾಗಿ ಸಾಗವಾನಿಯನ್ನೆ ಹೆಚ್ಚಾಗಿ ಬೆಳೆಸುತ್ತಿದ್ದ ಇವರು ಇದರ ಹೊರತಾಗಿ ಬೀಟೆ, ಅತ್ತಿ, ಆಲ, ಹುನಾಲು, ಚೆಳ್ಳೆ, ಹೆಬ್ಬೆಲಸು, ನಂದಿ ಮತ್ತಿ ಮುಂತಾದ ಮರಗಳ ಎಲ್ಲ ಮಾಹಿತಿಗಳ ಅರಿವನ್ನು ಹೊಂದಿದ್ದರು. ಯಾವ ಯಾವ ಮರದಿಂದ ಏನೇನು ಪ್ರಯೋಜನ, ಯಾವ ಮರದಲ್ಲಿ ಯಾವಾಗ ಬೀಜ ಒಣಗುತ್ತದೆ, ಯಾವ ಜಾತಿಯ ಸಸಿಗಳಿಗೆ ಎಷ್ಟು ನೀರಿನ ಅವಶ್ಯಕತೆ ಇದೆ ಮುಂತಾದ ಹಲವಾರು ಮಾಹಿತಿಗಳು ಅರಣ್ಯ ಇಲಾಖೆ ಸಿಬ್ಬಂದಿಗಳಿಗಿಂತ ಚೆನ್ನಾಗಿ ಇವರಿಗೆ ತಿಳಿದಿದೆ. ಸಸಿಗಳ ಉತ್ಪಾದನೆಯಲ್ಲಿ ಇವರಿಗೆ ಇರುವ ಜ್ಞಾನ, ತೋರುವ ಪ್ರಯೋಗಶೀಲತೆ, ಗಿಡ ಮರ ಬೀಜಗಳ ಕುರಿತಾದ ಮಾಹಿತಿ ಅರಣ್ಯ ವಿಜ್ಞಾನಿಗಳನ್ನು ಕೂಡ ಬೆರಗುಗೊಳಿಸುತ್ತದೆ. ಜಿಲ್ಲೆಯ ಅಂಕೋಲಾ, ಶಿರಸಿ, ಯಲ್ಲಾಪುರ ತಾಲೂಕುಗಳಲ್ಲಿ ಇವರು ನೆಟ್ಟು ಬೆಳೆಸಿದ ಗಿಡಗಳು ಇಂದು ಹೆಮ್ಮರವಾಗಿ ಬೆಳೆದು ಭೂತಾಯಿಯ ಒಡಲು ರಕ್ಷಿಸುತ್ತಿವೆ ಎನ್ನುವ ಮಾಹಿತಿ ಸಮಾಜಕ್ಕೆ ನೀಡಿದ್ದರು.

ಲಭಿಸಿದ ಪ್ರಶಸ್ತಿಗಳು:

ಸೇವೆಯ ಅವಧಿಯಲ್ಲಿ ತುಳಸಿಯ ಪರಿಸರ ಕಾಳಜಿಯನ್ನು ಗಮನಿಸಿ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, 1999 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ, ಇಂಡವಾಳು ಎಚ್ ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಸೇರಿದಂತೆ ಹಲವಾರು ರಾಜ್ಯ ಮಟ್ಟದ ಪ್ರಶಸ್ತಿಗಳು ಇವರಿಗೆ ದೊರೆತಿವೆ. ಇವರು ನಿವೃತ್ತಿಯ ನಂತರವೂ ತಮ್ಮ ಗಿಡ ನೆಡುವ ಕಾರ್ಯವನ್ನು ಕೈ ಬಿಡಲಿಲ್ಲ. ಮುಂದುವರೆದು ವಯಸ್ಸಾದಂತೆ ದೂರ ಹೋಗಲು ಕಷ್ಟವಾದಾಗ ತಮ್ಮ ಮನೆಯ ಸುತ್ತಮುತ್ತಲಿನ ಕಾಡಿನಲ್ಲಿಯೇ ಸಸ್ಯ ಸಂಕುಲವನ್ನು ಬೆಳೆಸಿ ಆರೈಕೆ ಮಾಡುತ್ತಿದ್ದರು.

ತುಳಸಜ್ಜಿ ಎಂದು ಜನಪ್ರಿಯವಾಗಿರುವ ಇವರ ಪರಿಸರ ಪ್ರೇಮದ ಬಗ್ಗೆ ತಿಳಿದು ರಾಜ್ಯದ ನಾನಾ ಭಾಗಗಳಿಂದ ಜನರು ಕುಗ್ರಾಮವಾದ ಹೊನ್ನಳ್ಳಿಗೆ ಬರುತ್ತಿದ್ದರು. ತಮ್ಮನ್ನು ಕಾಣಲು ಬಂದವರನ್ನು ಪ್ರೀತಿಯಿಂದ ಬರಮಾಡಿಕೊಳ್ಳುವ ಇವರು ಪರಿಸರದ ಬಗ್ಗೆ ವಿಶೇಷ ಕಾಳಜಿಯ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತ ಮುಂದಿನ ಪೀಳಿಗೆಗಾಗಿ ಅರಣ್ಯವನ್ನು ಸಂರಕ್ಷಿಸುವ ಬಗ್ಗೆ ತಿಳುವಳಿಕೆ ನೀಡುತ್ತಿದ್ದರು.

ಇಂದಿನ ಪರಿಸರ ನಾಶದ ಬಗ್ಗೆ ಕಿಡಿ ಕಾರುವ ಇವರು ಭವಿಷ್ಯದಲ್ಲಿ ಇದರಿಂದಾಗಿ ತಮ್ಮ ಮರಿ ಮಕ್ಕಳಿಗೆ ಆಗಬಹುದಾದ ದುರವಸ್ಥೆಯ ಬಗ್ಗೆ ಕಲ್ಪಿಸಿ ಮರಗುತ್ತಿದ್ದವರು ತುಳಸಿಗೌಡ ಅವರು. ತಾವು ಮೊದಲೆಲ್ಲ ಸಾಗುವಾನಿ, ಮಾವು, ಹಲಸು ಮುಂತಾದ ಪರಿಸರ ಪ್ರೇಮಿ ಮರಗಳನ್ನು ಬೆಳೆಸುತ್ತಿದ್ದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಇವರು ಇಂದು ಎಲ್ಲೆಡೆ ಅಂತರ್ಜಲ ಮಟ್ಟವನ್ನು ಕಡಿಮೆ ಮಾಡುತ್ತಿರುವ, ಅಶುದ್ಧ ವಾತಾವರಣ ನಿರ್ಮಾಣ ಮಾಡುತ್ತಿರುವ ಅಕೇಶಿಯಾ ಬೆಳೆಸುತ್ತಿರುವುದನ್ನು ಕಂಡು ಬೇಸರ ವ್ಯಕ್ತ ಪಡಿಸಿದ್ದ ಅವರು ಪ್ರಾರಂಭದಿಂದಲೂ ಕಡು ಬಡತನದಲ್ಲೇ ಬೆಳೆದ ತುಳಸಿ ಈಗ ಸಿಗುವ ಅಲ್ಪ ಪಿಂಚಣಿಯಿಂದ ಜೀವನ ಸಾಗಿಸುತ್ತಿದ್ದರು. ಇಬ್ಬರು ಗಂಡು ಮಕ್ಕಳು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸುಮಾರು 50 ವರ್ಷಗಳಿಂದ ಭೂತಾಯಿಯನ್ನು ಹಸಿರಾಗಿಸುವ ಕಾಯಕದಲ್ಲಿ ತೊಡಗಿ ಸುಮಾರು 30 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News