ಭಟ್ಕಳ| ವಿದ್ಯಾರ್ಥಿ ಸಾವಿಗೆ ಶಿಕ್ಷಕರ ನಿರ್ಲಕ್ಷ್ಯವೇ ಕಾರಣ: ಮೃತ ವಿದ್ಯಾರ್ಥಿಯ ಸಂಬಂಧಿಕರ ಆರೋಪ

Update: 2024-12-19 16:06 GMT

ಭಟ್ಕಳ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳದ ಸರಕಾರಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ನಿರುಪಾದಿ ದುರ್ಗಪ್ಪ ಹರಿಜನ (14) ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆಗೆ ಶಿಕ್ಷಕರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಯಲಬುರ್ಗಾದಿಂದ ಭಟ್ಕಳಕ್ಕೆ ಬಂದ ಮೃತ ಬಾಲಕನ ಕುಟುಂಬಸ್ತರು ಗುರುವಾರ ಭಟ್ಕಳದಲ್ಲಿ ಪ್ರತಿಭಟನೆ ನಡೆಸಿದರು.

ಮೃತದೇಹ ಸ್ಥಳವನ್ನು ವೀಕ್ಷಿಸಿದ ಸಂಬಂಧಿಕರು, "ಬಾಲಕನ ಸಾವಿಗೆ ಶಿಕ್ಷಕರೇ ಹೊಣೆಗಾರರು. ವಿದ್ಯಾರ್ಥಿಗಳ ಸುರಕ್ಷತೆ ಯನ್ನು ಕಡೆಗಣಿಸಿರುವ ಶಿಕ್ಷಕರ ತಾರತಮ್ಯ ನೀತಿಯ ಪರಿಣಾಮ ದಲಿತ ಬಾಲಕ ಸಾವಿಗೀಡಾಗಿದ್ದಾನೆ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವಾರ ಮುರ್ಡೇಶ್ವರದಲ್ಲಿ ನಡೆದಿದ್ದ ಪ್ರವಾಸದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ ಹಿನ್ನೆಲೆ, ಪ್ರವಾಸ ಬೇಡವೆಂದು ಸೂಚಿಸಿದ್ದರೂ ಶಿಕ್ಷಕರು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದಾರೆ ಎಂದು ಅವರು ಆರೋಪಿಸಿದರು.

ಸ್ಥಳದಲ್ಲಿ ತಹಶೀಲ್ದಾರ್ ನಾಗೇಂದ್ರ ಶೆಟ್ಟಿ ಮತ್ತು ಶಹರ ಠಾಣೆಯ ಪಿಐ ಗೋಪಿಕೃಷ್ಣ ಅವರು ಪ್ರತಿಭಟನಾಕಾರರನ್ನು ಶಾಂತಗೊಳಿಸಲು ಪ್ರಯತ್ನಿಸಿದರೂ ಶಿಕ್ಷಕರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದು ಪ್ರತಿಭಟಿಸಿದರು. ನಮಗೆ ನ್ಯಾಯ ಸಿಗುವವರೆಗೆ ಮೃತದೇಹವನ್ನು ಮುಟ್ಟುವುದಿಲ್ಲ ಎಂದು ಹಟ ಹಿಡಿದ ಕುಟುಂಬಸ್ಥರಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮನವೊಲಿಸುವಲ್ಲಿ ಯಶಸ್ವಿಯಾದರು.

ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗೆ ಮಾಹಿತಿ ನೀಡಿದ ಭಟ್ಕಳ ಡಿವೈಎಸ್ಪಿ ಮಹೇಶ ಕೆ. ಕುಟುಂಬಸ್ಥರು ತಮ್ಮ ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ವಿದ್ಯಾರ್ಥಿಯೂ ಮೂತ್ರ ವಿಸರ್ಜನೆಗೆಂದು ಹೋದಾಗ ಈ ಘಟನೆ ಸಂಭವಿಸಿದ್ದು ಇದೊಂದು ಅಸ್ವಾಭಾವಿಕ ಸಾವು ಎಂದು ಹೇಳಿದರು.

ವಿದ್ಯಾರ್ಥಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಅವರ ಕುಟುಂಬಕ್ಕೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಿವೇಶನದ ಮಾಲಿಕನ ವಿರುದ್ಧ ಕ್ರಮಕ್ಕೆ ಸ್ಥಳಿಯರ ಆಗ್ರಹ: ಕಳೆದ 10-15 ವರ್ಷಗಳಿಂದ ನಿವೇಶನದಲ್ಲಿದ್ದ ನೆಲಸಮ ಗೊಂಡಿರುವ ಬಾವಿಯಲ್ಲಿ 2-3 ದನಗಳು ಬಿದ್ದು ಸತ್ತುಹೋಗಿವೆ. ಹೆದ್ದಾರಿ ಪಕ್ಕದಲ್ಲೇ ಇರುವ ಈ ನಿವೇಶನದಲ್ಲಿ ಇಂತಹ ಪಾಳು ಬಿದ್ದ ಬಾವಿಯಲ್ಲಿ ರಾತ್ರಿಯ ಕತ್ತಲೆ ಬಿಡಿ ಹಗಲಲ್ಲೇ ಯಾರಾದರೂ ಬೀಳಬಹುದು. ಅಂತಹ ಅಪಾಯಕಾರಿ ಪರಿಸ್ಥಿತಿ ಇದ್ದರೂ ಬಾವಿಗೆ ಗೋಡೆ ಕಟ್ಟದೆ ನಿರ್ಲಕ್ಷ್ಯ ವಹಿಸಿದ್ದಾರೆ ಇದಕ್ಕಾಗಿ ನಿವೇಶನದ ಮಾಲಿಕನ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ.




 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News