ಭಟ್ಕಳ: ರಸ್ತೆ ಅಪಘಾತ; ಬೈಕ್ ಸವಾರ ಮೃತ್ಯು
ಭಟ್ಕಳ: ಹೊಸದಾಗಿ ನಿರ್ಮಿಸಿದ ಹಂಪ್ ದಾಟಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿದ ಬೈಕ್ ಅಪಘಾತಕ್ಕೀಡಾಗಿ, ಮುಂಡಳ್ಳಿ ನಿವಾಸಿ ರೂಪೇಶ್ ಗೋವಿಂದ ದೇವಾಡಿಗ (30) ಎಂಬವರು ಮೃತಪಟ್ಟ ಘಟನೆ ಭಟ್ಕಳದ ಶಿರಾಲಿ ಚೆಕ್‌ಪೋಸ್ಟ್ ಬಳಿ ನಡೆದಿದೆ.
ಸ್ಥಳೀಯ ಮೂಲಗಳ ಪ್ರಕಾರ, ರೂಪೇಶ್ ಮುರ್ಡೇಶ್ವರದಿಂದ ಭಟ್ಕಳದ ಕಡೆಗೆ ತಮ್ಮ ಮನೆಗೆ ತೆರಳುತ್ತಿದ್ದರು. ಶಿರಾಲಿ ಚೆಕ್‌ಪೋಸ್ಟ್ ಬಳಿ ಅಲ್ಪ ಹೊತ್ತಿನ ಮೊದಲು ನಿರ್ಮಿಸಲಾದ ಹಂಪ್ ಎದುರಾದಾಗ, ಏಕಾಏಕಿ ಬ್ರೇಕ್ ಹಾಕಿದ ಕಾರಣದಿಂದ ಅವರ ಬೈಕ್ ನಿಯಂತ್ರಣ ತಪ್ಪಿ ಹೆದ್ದಾರಿಗೆ ಬಿದ್ದಿದೆ. ಈ ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟಾಗಿದ್ದು, ಪ್ರಾಥಮಿಕ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಮ್.ಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮುಂಜಾನೆ 5:30ಕ್ಕೆ ರೂಪೇಶ್ ಮೃತಪಟ್ಟಿದ್ದಾರೆ.
ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.