ಶಾಲಾ ಕ್ರೀಡಾಕೂಟಗಳಲ್ಲಿ ಪಾಲಕರು ಭಾಗವಹಿಸದೇ ಇರುವುದು ಬೇಸರ: ನಿಝಾಮ್ ಮಮ್ಮಿಗಟ್ಟಿ
ಭಟ್ಕಳ: ಶಾಲೆಗಳಲ್ಲಿ ಜರುಗುವ ವಾರ್ಷಿಕ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳ ಪಾಲಕರು ಮತ್ತು ಪೋಷಕರು ಭಾಗವಹಿ ಸದೇ ಇರುವುದು ಬಹಳ ಬೇಸರದ ಸಂಗತಿಯಾಗಿದೆ ಎಂದು ಇಸ್ಲಾಮಿಯಾ ಅಂಗ್ಲೋ ಉರ್ದು ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನಿಝಾಮ್ ಮಮ್ಮಿಗಟ್ಟಿ ಹೇಳಿದರು.
ಅವರು ಹೆಬಳೆ ಪಂಚಾಯತ್ ವ್ಯಾಪ್ತಿಯ ಐ.ಸಿ.ಎಸ್.ಇ ಪಠ್ಯಕ್ರಮದ ನ್ಯೂ ಶಮ್ಸ್ ಶಾಲೆಯ ವಾರ್ಷೀಕ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ರೀಡೆಗಳಲ್ಲಿ ಸೋಲುವವರು ಇರುವುದರಿಂದಲೇ ಗೆಲವು ಸಾಧ್ಯ. ಆದ್ದರಿಂದ ಯಾವುದೇ ವಿದ್ಯಾರ್ಥಿ ತಾನು ಸೋಲನ್ನು ಕಂಡಿದ್ದರೆ ಬೇಸರಿಸದೆ ಇನ್ನೊಬ್ಬರ ಗೆಲುವಿಗೆ ಕಾರಣನಾಗಿದ್ದೇನೆ ಎಂದು ಖುಷಿ ಪಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನ್ಯೂ ಶಮ್ಸ್ ಸ್ಕೂಲ್ ಬೋರ್ಡ್ ಅಧ್ಯಕ್ಷ ನಝೀರ್ ಆಹ್ಮದ್ ಖಾಝಿ, ಇಂದು ವಿದ್ಯಾರ್ಥಿ ಏಕಮುಖಿಯಾಗುತ್ತಿದ್ದಾನೆ. ಸಾಮಾಜಿಕ ಮಾಧ್ಯಮಗಳ ಪ್ರಭಾವ ವಿದ್ಯಾರ್ಥಿಗಳನ್ನು ಸಮಾಜದಿಂದ ದೂರಮಾಡುತ್ತಿವೆ. ಶಾಲೆಯಿಂದ ಮನೆಗೆ ಹೋಗಿ ಕೋಣೆ ಸೇರಿಕೊಂಡರೆ ಸಾಕು, ಸಮಾಜದೊಂದಿಗಿನ ಸಂಬಂಧವನ್ನು ಕಳಚಿಕೊಂಡು ತನ್ನ ಕೋಣೆಯೊಳಗೆ ಬಂಧಿಯಾಗುತ್ತಿದ್ದಾನೆ. ವಿದ್ಯಾರ್ಥಿಗಳು ಇದರಿಂದ ಹೊರಬಂದು ಸಮಾಜಮುಖಿಯಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ, ಭಟ್ಕಳ ಮುಸ್ಲಿಮ್ ಯೂತ್ ಫೆಡರೇಷರನ್ ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಹುಸೇನ್ ಹಲ್ಲಾರೆ ವಿದ್ಯಾರ್ಥಿಗಳಿಗೆ ಕ್ರೀಡಾಸ್ಪೂರ್ತಿಯ ಕುರಿತು ಮಾಗದರ್ಶನ ನೀಡಿದರು.
ರಿಯಾದ್ ನ ಭಟ್ಕಳ ಮುಸ್ಲಿಮ್ ಜಮಾಅತ್ ಕಾರ್ಯಕಾರಿ ಸದಸ್ಯ ನಸೀಫ್ ಇಕ್ಕೇರಿ, ಸಮಾಜಿಕ ಕಾರ್ಯಕರ್ತ ನಝೀರ್ ಕಾಶಿಮಜಿ, ತರಬಿಯತ್ ಎಜ್ಯುಕೇಶನ್ ಸೂಸೈಟಿ ಆಡಳಿತ ಮಂಡಳಿಯ ಸದಸ್ಯರಾದ ಎಸ್.ಎಂ.ಸೈಯ್ಯದ್ ಶಕೀಲ್, ಸೈಯ್ಯದ್ ಯಾಸೀರ್ ನದ್ವಿ ಬರ್ಮಾವರ್, ಮೌಲಾನ ಝೀಯವುರ್ರಹ್ಮಾನ್ ನದ್ವಿ ರುಕ್ನುದ್ದೀನ್, ಮೌಲಾನ ಸೈಯ್ಯದ್ ಖುತುಬ್ ಬರ್ಮಾವರ್ ನದ್ವಿ, ಮಸಾಬ್ ರುಕ್ನುರದ್ದೀನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಲಿಯಾಖತ್ ಅಲಿ ಸ್ವಾಗತಿಸಿದರು. ಶಿಕ್ಷಕ ಮುಹಮ್ಮದ್ ರಝಾ ಮಾನ್ವಿ ಧನ್ಯವಾದ ಅರ್ಪಿಸಿದರು. ವಿದ್ಯಾರ್ಥಿಗಳಾದ ಉಮರ್ ಮತ್ತು ಮುಶಾಹಿಲ್ ಕಾರ್ಯಕ್ರಮ ನಿರೂಪಿಸಿದರು.