ಭಟ್ಕಳ: ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಟೆಮ್-2024 ಕಾರ್ಯಕ್ರಮ
ಭಟ್ಕಳ: ಅಂಜುಮನ್ ಹಾಮಿ ಇ ಮುಸ್ಲಿಮೀನ್ ಅಂಜುಮನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್‌ಮೆಂಟ್ (AITM) ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ (ಸ್ಟೆಮ್) STEM-2024 ಕಾರ್ಯಕ್ರಮ ಶನಿವಾರ ಯಶಸ್ವಿಯಾಗಿ ಜರುಗಿತು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕಾಲೇಜಿ ಪ್ರಾಂಶುಪಾಲ ಡಾ. ಫಝ್ಲುರ್ ರಹ್ಮಾನ್, "STEM ಶಿಕ್ಷಣವು ಆತ್ಮವಿಶ್ವಾಸ ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಿ, ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವದೊಂದಿಗೆ ನಾವೀನ್ಯತೆ ಕಲ್ಪಿಸಲು ಸಹಾಯ ಮಾಡುತ್ತದೆ" ಎಂದ ಅವರು, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತವನ್ನು ಪ್ರತಿನಿಧಿಸುವ STEM ಪರಿಕಲ್ಪನೆಯು ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಜ್ಞಾನ ಹೆಚ್ಚಿಸಲು ಹಾಗೂ ಎಲ್ಲ ವಿಷಯಗಳನ್ನು ಪರಸ್ಪರ ಸಂಯೋಜಿಸಲು ಸಹಾಯ ಮಾಡುತ್ತದೆ ಎಂದರು.
ಕಾರ್ಯಕ್ರಮದ ಸಂಯೋಜಕ ಡಾ. ಅನಂತಮೂರ್ತಿ ಶಾಸ್ತ್ರಿ ಮಾತನಾಡಿ, ಜೈವಿಕ ತಂತ್ರಜ್ಞಾನದ ಮಹತ್ವವನ್ನು ವಿವರಣೆ ಮಾಡುತ್ತಾ, "ವಿಜ್ಞಾನ ಮತ್ತು ತಂತ್ರಜ್ಞಾನದ ಸಂಯೋಜನೆಯಿಂದ ನವೀನ ಕಲ್ಪನೆಗಳನ್ನು ಮೂಡಿಸಬಹುದು" ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ನೌಮನ್ ಪಟೇಲ್ ಶಾಬಂದ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ ವೇದಿಕೆಯಲ್ಲಿದ್ದರು. ಪ್ರೊ.ಖರ್ರತ್ ಉಲ್ ಐನ್ ಸ್ವಾಗತಿಸಿ, ಪ್ರೊ. ಶ್ರೀಶೈಲ ಭಟ್ ವಂದಿಸಿದರು. ರಾಜ್ಯದ ವಿವಿಧ ಪದವಿಪೂರ್ವ ಕಾಲೇಜುಗಳಿಂದ 450 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.