ಭಟ್ಕಳ: ಕವಿ ಸೈಯದ್ ಸಮೀವುಲ್ಲಾ ಬರ್ಮಾವರ್ ʼಮಥಿಯಾಸ್ ಫ್ಯಾಮಿಲಿ ಕಾವ್ಯ ಪ್ರಶಸ್ತಿʼಗೆ ಆಯ್ಕೆ

Update: 2024-12-23 13:25 GMT

ಭಟ್ಕಳ: ಭಟ್ಕಳದ ಹೆಸರಾಂತ ನವಾಯತ್ ಕವಿ ಮತ್ತು ಗಾಯಕ ಸೈಯದ್ ಸಮೀವುಲ್ಲಾ ಬರ್ಮಾವರ್ ಅವರನ್ನು ಕವಿತಾ ಟ್ರಸ್ಟ್‌ನ ಮಥಿಯಾಸ್ ಫ್ಯಾಮಿಲಿ ಕಾವ್ಯ ಪ್ರಶಸ್ತಿ - 2024 ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಶಸ್ತಿಯು 25,000 ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪ್ರಶಂಸಾ ಪತ್ರ ಹೊಂದಿದೆ. ಜ.12 ರಂದು ಉಡುಪಿಯ ಸಾಸ್ತಾನದಲ್ಲಿ ನಡೆಯುವ 19ನೇ ಕವಿತಾ ಫೆಸ್ಟ್ ವೇಳೆ ಪ್ರಶಸ್ತಿ ಬರ್ಮಾವರ್ ಅವರಿಗೆ ಪ್ರದಾನ ಮಾಡಲಾಗುವುದು.

1956ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಜನಿಸಿದ ಬರ್ಮಾವರ್ ಅವರು ತಮ್ಮ ನವಾಯತಿ ಕಾವ್ಯದ ಅಪಾರ ಕೊಡುಗೆಗಾಗಿ ಪ್ರಸಿದ್ಧರು. ಉರ್ದುವಿನಲ್ಲಿ ಆರಂಭವಾಗಿ, ನಂತರ ನವಾಯತಿ ಭಾಷೆಗೆ ತಮ್ಮನ್ನು ಸಮರ್ಪಿಸಿಕೊಂಡ ಅವರು, ಸಮುದಾಯದ ಪ್ರಮುಖ ಸಾಹಿತ್ಯಿಕ ಚಲನಶೀಲ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಕಾವ್ಯ ನಂಬಿಕೆ, ಪ್ರೀತಿ, ಸಾಮಾಜಿಕ ಸಮಸ್ಯೆಗಳು, ಮತ್ತು ಪರಂಪರೆಯ ಆಳವನ್ನು ಪರಾಮರ್ಶಿಸುತ್ತದೆ.

2012ರಲ್ಲಿ ಪ್ರಕಟಿತ "ನೀಟ್ ವಾಟ್"(ನವಾಯತಿ ಭಾಷೆ) ಎಂಬ ಚೊಚ್ಚಲ ಕವನ ಸಂಕಲನದ ಮೂಲಕ ಅವರು ನವಾಯತಿ ಸಾಹಿತ್ಯದಲ್ಲಿ ತಮ್ಮ ವಿಶಿಷ್ಟ ಸ್ಥಾನವನ್ನು ಸೃಷ್ಠಿಸಿದ್ದಾರೆ. ನವಾಯತಿ ಮುಷಾಯಿರಾಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದು, ಭಾಷೆಯ ಶ್ರೀಮಂತ ಪರಂಪರೆಯನ್ನು ಕಾಪಾಡುವ ಜೊತೆಗೆ ಉರ್ದುವಿನಿಂದ ನವಾಯತಿ ಭಾಷೆಗೆ ಸಾಹಿತ್ಯಿಕ ಒತ್ತನ್ನು ವಿಸ್ತರಿಸಿದ್ದಾರೆ.

ಬರ್ಮಾವರ್ ಅವರು ನವಾಯತಿ ಕಾವ್ಯವನ್ನು ಕಿರಿಯ ಪ್ರೇಕ್ಷಕರಿಗೂ ಪರಿಚಯಿಸುವಂತೆ ಹಲವಾರು ಆಡಿಯೋ ಕ್ಯಾಸೆಟ್‌ ಗಳು ಮತ್ತು ಸಿಡಿಗಳನ್ನು ರಚಿಸಿದ್ದು, ನವಾಯತ್ ಮೆಹ್ಫಿಲ್ ಸಂಸ್ಥೆಯ ಸಂಸ್ಥಾಪಕರಾಗಿ ಭಾಷಾ ಮತ್ತು ಸಂಸ್ಕೃತಿಯ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಪ್ರಯತ್ನಗಳಿಗೆ ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಅವರು ಪಡೆದಿದ್ದಾರೆ.

ಮಥಿಯಾಸ್ ಫ್ಯಾಮಿಲಿ ಕಾವ್ಯ ಪ್ರಶಸ್ತಿ 2008ರಲ್ಲಿ ದುಬೈನ ಮೇರಿಟ್ ಫ್ರೈಟ್ ಸಿಸ್ಟಮ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಜೋಸೆಫ್ ಮಥಿಯಾಸ್ ತಮ್ಮ ಕುಟುಂಬದ ಪರಂಪರೆಯನ್ನು ಗೌರವಿಸಲು ಸ್ಥಾಪಿಸಿದ ಈ ಪ್ರಶಸ್ತಿಯ 17ನೇ ಪುರಸ್ಕೃತ ರಾಗಿರುವ ಬರ್ಮಾವರ್, ನವಾಯತ್ ಸಾಹಿತ್ಯದ ಪ್ರಗತಿಗೆ ಮತ್ತು ಯುವ ಕವಿಗಳಿಗೆ ಸ್ಫೂರ್ತಿಯಾಗಿದ್ದಾರೆ.

ಜ.12ರಂದು ಉಡುಪಿಯ ಎಕ್ಸ್‌ಪ್ರೆಶನ್ಸ್ ಸಹಯೋಗದಲ್ಲಿ ಕವಿತಾ ಟ್ರಸ್ಟ್ ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರಲ್ಲಿ ದೇಶದ ಹೆಸರಾಂತ ಕವಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಶಸ್ತಿಗೆ ಭಾಜನರಾದ ಸೈಯ್ಯದ್ ಸಮಿಯುಲ್ಲಾ ಬರ್ಮಾವರ್ ತಮ್ಮ ಸಂತೋಷವನ್ನು ಮಾಧ್ಯಮಗಳೊಂದಿಗೆ ಹಂಚಿ ಕೊಂಡಿದ್ದು, ನವಾಯತ್ ಮತ್ತು ಕೊಂಕಣಿ ಭಾಷೆಗಳು ಸಹೋದರ ಭಾಷೆಯಾಗಿದ್ದು ಈ ಭಾಷೆಯಲ್ಲಿ ಸಾಹಿತ್ಯ ರಚನೆ ಇನ್ನಷ್ಟು ಆಗಬೇಕಿದೆ ಎಂದು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News