ಐಟಾ ರಾಷ್ಟ್ರೀಯ ಅಧ್ಯಕ್ಷರಾಗಿ ಶೇಖ್ ಅಬ್ದುಲ್ ರಹೀಮ್ ಮರು ಆಯ್ಕೆ
ಹೊಸದಿಲ್ಲಿ: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ (ಐಟಾ) ಭಾರತದ ಶಿಕ್ಷಕರ ರಾಷ್ಟ್ರವ್ಯಾಪಿ ಸಂಘಟನೆಯಾಗಿದ್ದು, ಪ್ರಸ್ತುತ ಅವಧಿ 2024 ಡಿಸೆಂಬರ್ 31ರಂದು ಮುಕ್ತಾಯವಾಗಲಿದೆ. ಮುಂದಿನ ಅವಧಿಗಾಗಿ (2025 ಜನವರಿ 1 ರಿಂದ 2028 ಡಿಸೆಂಬರ್ 31) ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯನ್ನು ಡಿ. 26ರಂದು ಹೊಸದಿಲ್ಲಿಯ ಐಟಾ ಕೇಂದ್ರದಲ್ಲಿ ಆಯೋಜಿಸಲಾಯಿತು.
ಈ ಚುನಾವಣಾ ಸಭೆಯಲ್ಲಿ ದೇಶದ 13 ರಾಜ್ಯಗಳಿಂದ 97 ರಾಜ್ಯ ಸಲಹಾ ಸಮಿತಿ ಸದಸ್ಯರು ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಪ್ರತಿನಿಧಿಗಳು ಭಾಗವಹಿಸಿದ್ದರು. ದಿನಪೂರ್ತಿಯ ವಿವಿಧ ಹಂತಗಳಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮಹಾರಾಷ್ಟ್ರದ ಶೇಖ್ ಅಬ್ದುಲ್ ರಹೀಮ್ ಅವರನ್ನು ಅವಿರೋಧವಾಗಿ ರಾಷ್ಟ್ರಾಧ್ಯಕ್ಷರಾಗಿ ಮರು ಆಯ್ಕೆ ಮಾಡಲಾಯಿತು.
ಶೇಖ್ ಅಬ್ದುಲ್ ರಹೀಮ್ ಅವರು ಎರಡನೇ ಬಾರಿಗೆ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸದಸ್ಯರು ಅವರ ಶ್ರೇಷ್ಠ ಕಾರ್ಯಕ್ಷಮತೆ ಮತ್ತು ನೈಪುಣ್ಯಗಳನ್ನು ಮೆಚ್ಚಿಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ.
ಚುನಾವಣಾ ಪ್ರಕ್ರಿಯೆಗೆ ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯದರ್ಶಿ ಟಿ. ಅರಿಫ್ ಅಲಿ ಅವರು ವೀಕ್ಷಕರಾಗಿ ಭಾಗವಹಿಸಿದ್ದರು
ಮುಂಬರುವ ಅವಧಿಯ ಪ್ರಮುಖ ಕಾರ್ಯ ಮತ್ತು ಸಂಘಟನೆಯ ಪ್ರಾಮುಖ್ಯತೆ ಕುರಿತು ಅವರು ಮಾತನಾಡಿದರು. ಸಭೆಯ ಆರಂಭದಲ್ಲಿ ದೆಹಲಿಯ ಸ್ಥಳೀಯ ಅಮೀರ್ ಸಲೀಮುಲ್ಲಾ ಖಾನ್ ಪ್ರವಚನವನ್ನು ನೀಡಿದರು.