ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕ್ರಮ ಕೈಗೊಳ್ಳಿ : ಆರ್.ಅಶೋಕ್
ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಹಾಗೂ ಸಿಬಿಐ ತನಿಖೆಗೆ ವಹಿಸುವವರೆಗೂ ಬಿಜೆಪಿಯಿಂದ ಹೋರಾಟ ನಡೆಯಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯ ಹೋರಾಟದ ಫಲವಾಗಿ ಮುಡಾ ಹಗರಣ ಈ ಹಂತಕ್ಕೆ ಬಂದಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಈ ಹೋರಾಟ ನಿಲ್ಲಲ್ಲ. ಸಚಿವ ಬಿ.ನಾಗೇಂದ್ರ ರಾಜೀನಾಮೆ ಕೊಡಲ್ಲ ಎಂದಿದ್ದರು. ಬಳಿಕ ಕಾನೂನಿನ ಕುಣಿಕೆಯಲ್ಲಿ ಸಿಲುಕಿಕೊಂಡು ರಾಜೀನಾಮೆ ನೀಡಿದರು. ಇದೇ ರೀತಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೇಳಿದರು.
ಚುನಾವಣಾ ಬಾಂಡ್ ಬಗ್ಗೆ ಕಾಂಗ್ರೆಸ್ ದೊಡ್ಡದಾಗಿ ಮಾತಾಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ 1,500ಕೋಟಿ ರೂ. ಗೂ ಅಧಿಕ ಹಣ ದೇಣಿಗೆ ಬಂದಿದೆ. ತೃಣಮೂಲ ಕಾಂಗ್ರೆಸ್‍ಗೆ 1,610ಕೋಟಿ ರೂ. ಬಂದಿದೆ. ವಿಪಕ್ಷಗಳ ಒಟ್ಟು ಹಣಕ್ಕೆ ಹೋಲಿಸಿದರೆ ಬಿಜೆಪಿಯದ್ದು ತೀರಾ ಕಡಿಮೆ. ಇದು ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಮುಗಿದುಹೋಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಮಾತನಾಡಲು ಈ ವಿವಾದ ಮಾಡಲಾಗಿದೆ. ಇದು ಮುಡಾ ಹಗರಣದ ಹಿನ್ನೆಲೆಯಲ್ಲಿ ಹುಟ್ಟುಹಾಕಿದ ವಿವಾದ. ಇವೆಲ್ಲವೂ ಕಾಂಗ್ರೆಸ್ ಪ್ರಾಯೋಜಿತ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೂರು ವರ್ಷ ಬಾಳಲಿ. ಅವರು ಪ್ರಧಾನಿ ಮೋದಿಯವರ ವಿರುದ್ಧ ಸವಾಲೆಸೆಯುವುದು ಬೇಡ. ಕರ್ನಾಟಕದಲ್ಲಿ ಒಮ್ಮೆ ಸಿಎಂ ಆಗಬೇಕೆಂಬ ಆಸೆಯನ್ನು ಖರ್ಗೆ ತೀರಿಸಿಕೊಳ್ಳಬಹುದು. ಆದರೆ ಮೋದಿಯವರನ್ನು ಪ್ರಧಾನಿ ಹುದ್ದೆಯಿಂದ ಕೆಳಕ್ಕಿಳಿಸಲು ಸಾಧ್ಯವಿಲ್ಲ. ಮುಳುಗುತ್ತಿರುವ ಹಡಗಾಗಿರುವ ಕಾಂಗ್ರೆಸ್ ದೋಣಿಯ ಮೂಲಕ ಈ ಕೆಲಸ ಮಾಡಲು ಹೋಗುವುದು ಹಗಲುಗನಸು ಎಂದು ವ್ಯಂಗ್ಯವಾಡಿದರು.
ಅಧಿಕಾರಿ ವಿರುದ್ಧ ಕ್ರಮ ವಹಿಸಿ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ನಿಂದಿಸಿದ್ದಾರೆ. ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾನೂನಿನಿಂದ ನುಣುಚಿಕೊಳ್ಳಲು ನೇರವಾಗಿ ಪತ್ರ ಬರೆಯದೆ, ಕೆಳಹಂತದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅಧಿಕಾರಿ ತನ್ನ ಮಿತಿ ಮೀರಿ ವರ್ತಿಸಿರುವುದು ಖಂಡನೀಯ. ಮುಖ್ಯ ಕಾರ್ಯದರ್ಶಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.