ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಭೆ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕ್ರಿಸ್ಮಸ್ ಹಾಗೂ ಹೊಸವರ್ಷ ಆಚರಣೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಳೆದ ವರ್ಷ ಅಚ್ಚುಕಟ್ಟಾಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡು ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಕ್ರಮ ವಹಿಸಲಾಗಿತ್ತು. ಬೆಂಗಳೂರು ವಿಶ್ವದ ಗಮನ ಸೆಳೆಯುವ ನಗರವಾಗಿರುವುದರಿಂದ ಯಾವುದನ್ನು ನಿರ್ಲಕ್ಷಿಸದೇ,ಅತ್ಯಂತ ಜವಾಬ್ಧಾರಿಯುತವಾಗಿ ಬಂದೋಬಸ್ತ್ ಕೈಗೊಳ್ಳಬೇಕು ಎಂದರು.
ಕ್ರಿಸ್ಮಸ್ ಆಚರಣೆ ಹಿನ್ನೆಲೆಯಲ್ಲಿ ಗುಪ್ತದಳ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. ಮಹಿಳಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಸಣ್ಣ ಪುಟ್ಟ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಿದೆ. ಹೊಸ ವರ್ಷ ಆಚರಿಸುವವರಿಗೆ ಆಡಚಣೆ ಮಾಡುವುದು ಬೇಡ. ಅವರಿಗೆ ಸುರಕ್ಷತೆ ನೀಡಬೇಕು. ತೊಂದರೆ ಉಂಟು ಮಾಡುವ ಕಿಡಿಗೇಡಿಗಳ ಮೇಲೆ ನಿಗಾವಹಿಸಿ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಅಗತ್ಯ ಬಂದೋಬಸ್ತ್ ಹಿನ್ನಲೆಯಲ್ಲಿ ನಗರದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಜೆ ನೀಡುವುದು ಬೇಡ. ತೀರ ಅಗತ್ಯತೆ ಮತ್ತು ಅನಿವಾರ್ಯತೆ ಇದ್ದವರಿಗೆ ರಜೆ ನೀಡಿ. ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆ ವೇಳೆ ಯಾವುದೇ ರೀತಿಯ ಅನಾಹುತಗಳು ಸಂಭವಿಸಿದರೆ ಸಂಬಂಧಪಟ್ಟ ಡಿಸಿಪಿ, ಎಸಿಪಿ, ಇನ್‍ಸ್ಪೆಕ್ಟರ್‌ಗಳನ್ನೇ ಹೊಣೆ ಮಾಡಲಾಗುವುದು. ಈ ವಿಚಾರದಲ್ಲಿ ಯಾರು ಏನೇ ಹೇಳಿದರು ಕೇಳುವುದಿಲ್ಲ ಎಂದು ಎಚ್ಚರಿಸಿದರು.
ಬಿಬಿಎಂಪಿ, ಬಿಎಂಟಿಸಿ ಬಿಎಂಆರ್‍ಸಿಎಲ್, ಆರೋಗ್ಯ ಮತ್ತು ಅಗ್ನಿಶಾಮಕ ಇಲಾಖೆಯ ನೆರವು ಪಡೆದುಕೊಳ್ಳಬೇಕು. ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನಚ್ಚರಿಕೆ ವಹಿಸಬೇಕು. ಪಾನಮತ್ತ, ಬೈಕ್ ವ್ಹೀಲಿಂಗ್ ಮಾಡುವ ದುಷ್ಕರ್ಮಿಗಳು ಹಾಗೂ ಹಳೇ ಪ್ರಕರಣಗಳ ಆರೋಪಿಗಳ ಮೇಲೆ ನಿಗಾ ಇರಿಸಬೇಕು. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳುವಂತೆ ಎಂದೂ ಅವರು ಸಭೆಯಲ್ಲಿ ಸೂಚಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಸಿಸಿಬಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಚಂದ್ರಗುಪ್ತ ಹಾಗೂ ಎಲ್ಲ ವಿಭಾಗದ ಉಪ ಪೊಲೀಸ್ ಆಯುಕ್ತರು, ಸಹಾಯಕ ಪೊಲೀಸ್ ಆಯುಕ್ತರು ಇದ್ದರು.