ಬಿಜೆಪಿ ನಾಯಕರದ್ದು ಬಾಯಿಯೋ, ತಿಪ್ಪೇ ಗುಂಡಿಯೋ : ದಿನೇಶ್ ಗುಂಡೂರಾವ್
ಬೆಂಗಳೂರು : ‘ರಾಜ್ಯ ಬಿಜೆಪಿ ನಾಯಕರದ್ದು ಬಾಯಿಯೋ ಅಥವಾ ತಿಪ್ಪೆಗುಂಡಿಯೋ ತಿಳಿಯದಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಬಿಜೆಪಿಯ ಒಬ್ಬ ನಾಯಕ ಪ್ರಜಾಪ್ರಭುತ್ವದ ದೇಗುಲವಾದ ಸದನದಲ್ಲೇ ಮಹಿಳೆಗೆ ಅಶ್ಲೀಲ ಪದ ಬಳಸುತ್ತಾರೆ. ಮತ್ತೊಂದು ಕಡೆ ಮುಖ್ಯಮಂತ್ರಿಯಂತಹ ಉನ್ನತ ಪದವಿ ಅಲಂಕರಿಸಿದ್ದ ಶೆಟ್ಟರ್ ನಮ್ಮ ಸರಕಾರವನ್ನು ಅತ್ಯಂತ ಕೊಳಕು ಮಾತಿನಿಂದ ಟೀಕಿಸಿದ್ದಾರೆ. ಇವರಿಗೆಲ್ಲಾ ಸಂಸ್ಕಾರ ಹೇಳಿಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ.
ಸಜ್ಜನರು ಕೇಳಲಾರದ ಭಾಷೆಯನ್ನು ಬಳಸುವ ಕೆಲ ಬಿಜೆಪಿ ನಾಯಕರು ತಾವು ಆರೆಸ್ಸೆಸ್‍ನ ಪ್ರೊಡಕ್ಟ್ ಎಂದು ಹೇಳಿಕೊಳ್ಳುತ್ತಾರೆ. ಆರೆಸ್ಸೆಸ್‍ನಲ್ಲಿ ಮಹಿಳೆಯರಿಗೆ ಅಶ್ಲೀಲ ಭಾಷೆ ಬಳಸಿ, ಸಾರ್ವಜನಿಕವಾಗಿ ಮಾತಾಡುವಾಗ ಕೊಳಕು ಪದ ಉಪಯೋಗಿಸಿ ಎಂದು ಹೇಳಿ ಕೊಡುತ್ತಾರೆಯೇ.? ಬಾಯಿ ಹೊಲಸು ಮಾಡಿಕೊಂಡು ಮಾತಾಡುವುದು ಸಭ್ಯತೆಯೆ? ಅಥವಾ ಈ ನೆಲದ ಸಂಸ್ಕೃತಿಯೇ ಎಂದು ಕಿಡಿಕಾರಿದ್ದಾರೆ.
ರಾಜ್ಯ @BJP4Karnataka ನಾಯಕರದ್ದು ಬಾಯಿಯೋ ಅಥವಾ ತಿಪ್ಪೆಗುಂಡಿಯೋ ತಿಳಿಯದಾಗಿದೆ. ಒಬ್ಬ ನಾಯಕ ಪ್ರಜಾಪ್ರಭುತ್ವದ ದೇಗುಲ ಎಂದು ಕರೆಸಿಕೊಳ್ಳುವ ಸದನದಲ್ಲೇ ಮಹಿಳೆಗೆ ಅಶ್ಲೀಲ ಪದ ಬಳಸುತ್ತಾರೆ. ಮತ್ತೊಂದು ಕಡೆ ಮುಖ್ಯಮಂತ್ರಿಯಂತಹ ಉನ್ನತ ಪದವಿ ಅಲಂಕರಿಸಿದ್ದ @JagadishShettar ನಮ್ಮ ಸರ್ಕಾರವನ್ನು ಅತ್ಯಂತ ಕೊಳಕು ಮಾತಿನಿಂದ ಟೀಕಿಸಿದ್ದಾರೆ.… pic.twitter.com/dD7ykgm0dm
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) December 23, 2024
‘ಬಿಜೆಪಿಯಲ್ಲಿ ಯಾರಾದರೂ ಮರ್ಯಾದಾ ಪುರುಷೋತ್ತಮರು ಇದ್ದರೆ, ಬಾಯಿಯನ್ನು ತಿಪ್ಪೆಗುಂಡಿ ಮಾಡಿಕೊಂಡಿರುವ ಇಂತವರಿಗೆ ಕಿವಿಹಿಂಡಿ ಬುದ್ಧಿ ಹೇಳಲಿ. ಇಲ್ಲವೇ ಬೈಠಕ್ ಕರೆದು ಸಾರ್ವಜನಿಕ ಜೀವನದಲ್ಲಿರುವವರು, ಸಾರ್ವಜನಿಕರ ಎದುರು ಹೇಗೆ ನಾಗರಿಕವಾಗಿ ಮಾತಾಡಬೇಕು ಎಂಬ ಅರಿವು ಮೂಡಿಸಲಿ. ಇಲ್ಲದೇ ಹೋದರೆ ಜನರೇ ಬುದ್ಧಿ ಕಲಿಸುತ್ತಾರೆ’
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ