ಜ.17ರಿಂದ 23ರ ವರೆಗೆ ಮಂಗಳೂರು-ಉಡುಪಿ ಜಿಲ್ಲೆಗಳಲ್ಲಿ ‘ಕ್ರೀಡಾಕೂಟ’ ಆಯೋಜನೆ : ಸಿಎಂ ಸಿದ್ದರಾಮಯ್ಯ

Update: 2024-12-23 14:27 GMT

ಬೆಂಗಳೂರು : ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಜ.17 ರಿಂದ 23ರ ವರೆಗೆ ಆಯೋಜಿಸಲಾಗುತ್ತಿರುವ ‘ಕರ್ನಾಟಕ ಕ್ರೀಡಾಕೂಟ-2025’ಕ್ಕೆ ಸಂಬಂಧಿಸಿದಂತೆ ವ್ಯವಸ್ಥಿತ ಏರ್ಪಾಡುಗಳನ್ನು ಮಾಡಲು ಮಂಗಳೂರು ಹಾಗೂ ಉಡುಪಿ ಜಿಲ್ಲಾಡಳಿಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ‘ಕರ್ನಾಟಕ ಕ್ರೀಡಾಕೂಟ-2025’ರ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆಯು ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಸಹಯೋಗದಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಜ.17ರಂದು ಮಂಗಳೂರಿನಲ್ಲಿ ನಡೆಯಲಿರುವ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ 23ರಂದು ಉಡುಪಿಯಲ್ಲಿ ಜರುಗಲಿರುವ ಸಮಾರೋಪ ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭಾಗಿಯಾಗಲಿದ್ದಾರೆ. ಸುಮಾರು 25 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದು ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಆಯೋಜಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.

ಕ್ರೀಡಾಕೂಟದಲ್ಲಿ 3750 ಕ್ರೀಡಾಪಟುಗಳು ಹಾಗೂ 750 ತಾಂತ್ರಿಕ ಅಧಿಕಾರಿಗಳು ಮತ್ತು ಸಂಘಟಕರು ಸೇರಿದಂತೆ ಅಂದಾಜು 4500 ಜನರು ಭಾಗವಹಿಸಲಿದ್ದು, ಊಟ-ತಿಂಡಿ, ವಸತಿ, ಸಾರಿಗೆ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚಿಸಿದರು.

ಮಂಗಳೂರಿನಲ್ಲಿ 12 ಕ್ರೀಡೆಗಳು ಹಾಗೂ ಉಡುಪಿ ಮತ್ತು ಮಣಿಪಾಲಗಳಲ್ಲಿ 11 ಕ್ರೀಡೆಗಳು ಆಯೋಜನೆಗೊಳ್ಳಲಿದ್ದು, ಶೂಟಿಂಗ್ ಮತ್ತು ಜಿಮ್ನಾಸ್ಟಿಕ್ ಕ್ರೀಡೆಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಕ್ರೀಡಾಕೂಟ ಲಾಂಛನ: ಕ್ರೀಡಾಕೂಟದ ಲಾಂಛನದಲ್ಲಿ ಯಕ್ಷಗಾನ ಕಿರೀಟವು ಕ್ರೀಡಾಕೂಟ ನಡೆಯುವ ಕರಾವಳಿ ಭಾಗದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು, ತಿಳಿನೀಲಿ ಬಣ್ಣವು ಕಡಲಿನ ಅಗಾಧತೆಯನ್ನು ಜತೆಗೆ ಸೋಲು-ಗೆಲುವು ಗಳಲ್ಲಿ ಕ್ರೀಡಾಪಟುಗಳ ಶಾಂತತೆ ಮತ್ತು ಶ್ರಮವನ್ನು ಪ್ರತಿನಿಧಿಸುವುದಾಗಿ ಅಧಿಕಾರಿಗಳು ವಿವರಿಸಿದರು.

ಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಇಂಧನ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ. ಗೋವಿಂದರಾಜು, ಮುಖ್ಯಮಂತ್ರಿಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News