ರಾಜ್ಯಪಾಲರು ಪಕ್ಷಪಾತ ಮಾಡಿದ್ದಾರೆಂಬುದು ಸುಳ್ಳು : ಆರ್.ಅಶೋಕ್
ಬೆಂಗಳೂರು : ‘ರಾಜಭವನದಲ್ಲಿ ಯಾವುದೇ ವಿಚಾರಣೆಗೆ ಅನುಮತಿ ಕೋರಿರುವ ಮನವಿಗಳು ಬಾಕಿ ಇಲ್ಲ ಎಂದು ರಾಜ್ಯಪಾಲರು ಸ್ಪಷ್ಟನೆ ನೀಡಿದ್ದು, ಮುಖ್ಯಮಂತ್ರಿ ವಿರುದ್ಧ ಮಾತ್ರ ಕಾನೂನು ಕ್ರಮಕ್ಕೆ ಅನುಮತಿ ನೀಡಿ ರಾಜ್ಯಪಾಲರು ಪಕ್ಷಪಾತ ಮಾಡುತ್ತಿದ್ದಾರೆಂಬ ಕಾಂಗ್ರೆಸ್ ಪಕ್ಷದ ಹಸಿಸುಳ್ಳು ಮಾತ್ರ ಎಂದು ಸಾಬೀತಾಗಿದೆ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಮುಜುಗರ ಅನುಭವಿಸುತ್ತಿರುವ ಕಾಂಗ್ರೆಸ್ ಸರಕಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಜನರ ದಿಕ್ಕು ತಪ್ಪಿಸಲು ಹೊರಟಿರುವುದು ಖಂಡನೀಯ ಮತ್ತು ಅಕ್ಷಮ್ಯ ಅಪರಾಧʼ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಸರಕಾರದ ಸರಣಿ ಭ್ರಷ್ಟಾಚಾರ ಬಯಲಾದಾಗಿನಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಆದಿಯಾಗಿ ಹಲವಾರು ಕಾಂಗ್ರೆಸ್ ನಾಯಕರು ಸಂವಿಧಾನಿಕ ಹುದ್ದೆ ಎಂಬುದನ್ನೂ ಮರೆತು ರಾಜ್ಯಪಾಲರನ್ನ ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ಬಾಂಗ್ಲಾದೇಶದ ರೀತಿ ದಾಳಿ ಮಾಡುವ ಬೆದರಿಕೆ ಒಡ್ಡುವುದು, ʼfriendly Governorʼ ಎಂದು ನ್ಯಾಯಾಲಯದಲ್ಲಿ ಆರೋಪ ಹೊರಿಸುವುದು, ಬಿಜೆಪಿ ಏಜೆಂಟ್ ಎಂದು ಛೇಡಿಸುವುದು, ಹೀಗೆ ಒಂದಲ್ಲ ಒಂದು ರೀತಿಯಲ್ಲಿ ರಾಜ್ಯಪಾಲರಿಗೆ ಅಗೌರವ ತೋರುತಲೇ ಬಂದಿದೆ ಎಂದು ಅವರು ಗಮನ ಸೆಳೆದಿದ್ದಾರೆ.