ಜಾಹೀರಾತು ಪರಿಶೀಲನಾ ಸಮಿತಿಗೆ ಕಾಂಗ್ರೆಸ್ ಪದಾಧಿಕಾರಿಗಳ ನೇಮಕ : ಆರ್.ಅಶೋಕ್ ಆಕ್ಷೇಪ
ಬೆಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೂತನವಾಗಿ ಜಾಹೀರಾತು ಪರಿಶೀಲನಾ ಸಮಿತಿ ರಚನೆ ಮಾಡಿರುವ ರಾಜ್ಯ ಸರಕಾರ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಮತ್ತು ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಅವರನ್ನು ಸಮಿತಿಯಲ್ಲಿ ನೇಮಕ ಮಾಡಿರುವುದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಜಾಹೀರಾತುಗಳನ್ನು ಪರಿಶೀಲನೆ ಮಾಡಲು ತಮ್ಮ ಪಕ್ಷದ ಪದಾಧಿಕಾರಿಗಳನ್ನು ನೇಮಿಸಿದ್ದೀರಲ್ಲ, ಕೆಪಿಸಿಸಿ ವಕ್ತಾರರಿಗೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಿಗೆ ಜಾಹೀರಾತು ಪರಿಶೀಲನೆ ಮಾಡುವ ಯಾವ ಅರ್ಹತೆ ಇದೆ? ಯಾವ ಅನುಭವ ಇದೆ? ಎಂದು ಪ್ರಶ್ನಿಸಿದ್ದಾರೆ.
ಜಾಹೀರಾತು ಪರಿಶೀಲನೆ ಸಮಿತಿಗೆ ಅರ್ಹರನ್ನು ನೇಮಕ ಮಾಡಬೇಕಾದರೆ ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಂಪಾದಕರನ್ನೋ ಅಥವಾ ವಾರ್ತಾ ಇಲಾಖೆಯ ಜಾಹೀರಾತು ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅನುಭವಿ ಅಧಿಕಾರಿಗಳನ್ನೋ ನೇಮಿಸಬಹುದಿತ್ತು. ಅದು ಬಿಟ್ಟು ಜಾಹೀರಾತು ಪರಿಶೀಲನಾ ಸಮಿತಿಗೆ ಆಡಳಿತ ಪಕ್ಷದ ಪದಾಧಿಕಾರಿಗಳನ್ನು ನೇಮಕ ಮಾಡಿರುವುದು ಎಷ್ಟು ಸಮಂಜಸ? ಎಂದು ಅವರು ಕೇಳಿದ್ದಾರೆ.
ಸರಣಿ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಸರಕಾರ ಜನಮನ್ನಣೆ ಕಳೆದುಕೊಂಡಿರುವ ಈ ಸಂದರ್ಭದಲ್ಲಿ ಇಂತಹ ನಡೆ ಸಹಜವಾಗಿ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಈ ನಡೆಯ ಹಿಂದೆ ಮಾಧ್ಯಮಗಳನ್ನು ಪರೋಕ್ಷವಾಗಿ ನಿಯಂತ್ರಣ ಮಾಡುವ ಹುನ್ನಾರ ಇದೆಯೇ? ಎಂದು ಅಶೋಕ್ ಟೀಕಿಸಿದ್ದಾರೆ.