ʼರಾಮೇಶ್ವರಂ ಕೆಫೆʼ ಸ್ಫೋಟ ಪ್ರಕರಣ: ಬಿಎಂಟಿಸಿ ಬಸ್‍ನಲ್ಲಿ ಶಂಕಿತ ಪ್ರಯಾಣ, ಸಿಸಿಟಿವಿ ದೃಶ್ಯ ಪರಿಶೀಲನೆ

Update: 2024-03-03 14:30 GMT

ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು, ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿ 30ರಿಂದ 35 ವರ್ಷದೊಳಗಿನ ಶಂಕಿತ ಎಂದು ಅಂದಾಜುಪಟ್ಟಿರುವುದಾಗಿ ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಶಂಕಿತ ಆರೋಪಿಯು ಬಾಂಬರ್ ಶರ್ಟ್, ಕಪ್ಪು ಪ್ಯಾಂಟ್ ಮತ್ತು ಕಪ್ಪು ಬೂಟುಗಳನ್ನು ಧರಿಸಿರುವುದು ಕಂಡುಬಂದಿದೆ. ಬಲಗೈಯಲ್ಲಿ ಕಪ್ಪು ಬ್ಯಾಗ್ ಧರಿಸಿದ್ದು, ಎಡಗೈಯಲ್ಲಿ ಮೊಬೈಲ್ ಹಿಡಿದುಕೊಂಡು ಬೆಳಗ್ಗೆ 11.34ಕ್ಕೆ ಕೆಫೆಗೆ ಪ್ರವೇಶಿಸಿ 11.50ಕ್ಕೆ ಹೊರಟು ಹೋಗಿರುವುದಾಗಿ ತಿಳಿದು ಬಂದಿದೆ.

ಆರೋಪಿಯು ಬಿಎಂಟಿಸಿ ವೋಲ್ವೋ ಬಸ್‍ನಲ್ಲಿ ಪ್ರಯಾಣಿಸಿರುವುದು ಬಸ್‍ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶಂಕಿತ ವ್ಯಕ್ತಿ ಪ್ರಯಾಣಿಸಿದ ಬಸ್ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕಾಡುಗೋಡಿ ನಡುವೆ ಸಿಎಮ್‍ಆರ್ ಐಟಿ ಕಾಲೇಜು, ಕುಂದಲಹಳ್ಳಿ ಕಾಲೋನಿ, ಐಟಿಪಿಎಲ್ ಬಸ್ ನಿಲ್ದಾಣಗಳು ಒಳಗೊಂಡ ಮಾರ್ಗ ಸಂಖ್ಯೆ ‘500 ಎಫ್’ ಎಂದು ಹೇಳಲಾಗಿದೆ. ಈ ಬಗ್ಗೆ ಬಿಎಂಟಿಸಿ ಅಧಿಕಾರಿಗಳು ಹಂಚಿಕೊಂಡಿರುವ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಬ್ ಸ್ಫೋಟಕ್ಕೂ ಮುನ್ನ ಶಂಕಿತ ಆರೋಪಿ ಬ್ಯಾಗ್ ಸಮೇತ ಓಡಾಡಿದ್ದಾನೆ. ಈತನ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಮುಖ ಕಾಣದಂತೆ ಕ್ಯಾಪ್ ಧರಿಸಿ ಓಡಾಡಿದ್ದು ಕಂಡುಬಂದಿದೆ. ಆತ ಉಳಿದುಕೊಂಡಿದ್ದ ಸ್ಥಳ, ಓಡಾಟ ನಡೆಸಿರುವ ರಸ್ತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇ 300ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಪೋಲಕಲ್ಪಿತ ವರದಿಗಳನ್ನು ಬಿತ್ತರಿಸದಿರಿ: ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್

‘ಬೆಂಗಳೂರು ಕೆಫೆಯಲ್ಲಿನ ಸ್ಫೋಟ ಪ್ರಕರಣದ ಕುರಿತ ತನಿಖೆಯ ವಿವರಗಳನ್ನು ಅಥವಾ ಕಪೋಲಕಲ್ಪಿತ ವರದಿಗಳನ್ನು ಬಿತ್ತರಿಸದಿರಿ. ತನಿಖಾ ತಂಡಗಳು ಸ್ವತಂತ್ರವಾಗಿ ಮತ್ತು ವೃತ್ತಿಪರವಾಗಿ ಕೆಲಸ ಮಾಡಲು ಅನುವು ಮಾಡಿಕೊಡಿ’ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಮಾಧ್ಯಮ ಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News