‘ಬರ’ ಷರತ್ತು ಸಡಿಲಿಕೆ ಕೋರಿ ಕೇಂದ್ರ ಸರಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ
ಬೆಂಗಳೂರು: ಕರ್ನಾಟಕದಲ್ಲಿ ಮಂಗಾರು ಮಳೆ ಕೊರತೆ ಉಂಟಾಗಿರುವ ಕಾರಣ ಬರಗಾಲ ಘೋಷಣೆ ಷರತ್ತುಗಳನ್ನು ಸಡಿಲಿಕೆ ಮಾಡಬೇಕೆಂದು ಆಗ್ರಹಿಸಿ ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಪ್ರಸಕ್ತ ಮಾನ್ಸೂನ್ ಋತುವಿನಲ್ಲಿ ಕರ್ನಾಟಕದಲ್ಲಿ ಸಹಜವಾಗಿ ಆಗಬೇಕಾದ 336 ಮಿ.ಮೀ. ಮಳೆಯ ಬದಲು 234 ಮಿ.ಮೀ. ಮಳೆ ಆಗಿದೆ. ಸುಮಾರು ಶೇ.34ರಷ್ಟು ಮಳೆಯ ಕೊರತೆಯಾಗಿದೆ. ವಿಳಂಬ ಮಾನ್ಸೂನ್ನಿಂದ ಜೂನ್ ತಿಂಗಳಲ್ಲಿಯೇಸುಮಾರುಶೇ.56ರಷ್ಟುಮಳೆಯ ಕೊರತೆ ಎದುರಾಗಿದೆ. ಹಲವು ತಾಲೂಕುಗಳಲ್ಲಿ ಬರ ರೀತಿಯ ಪರಿಸ್ಥಿತಿ ಇದೆ. ಕಠಿಣ ಮಾನದಂಡಗಳಿಂದ ಹಲವು ತಾಲೂಕುಗಳಲ್ಲಿ ಬರ ಎಂದು ಘೋಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ಬರ ಘೋಷಣೆ ಮಾಡಬೇಕಾದರೆ ರಾಜ್ಯ ಸರಕಾರಕ್ಕೆ ರೈತರು ಬಿತ್ತನೆ ಮಾಡಬಾರದು ಎಂಬ ಸೂಚನೆಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂಬ ಷರತ್ತು ಇದೆ. ರೈತರಿಗೆ ಈ ರೀತಿಯ ಸೂಚನೆ ನೀಡುವುದು ಅಸಾಧ್ಯವಾಗಿರುವ ಕಾರಣ, ಈ ಷರತ್ತನ್ನು ಪ್ರಮುಖವಾಗಿ ಕೈಬಿಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ. ಅತಿವೃಷ್ಠಿಯಿಂದಾಗಿ ಶೇಕಡ ಶೇ.33ರಷ್ಟು ಬೆಳೆ ಹಾನಿಯಾದರೆ ಪರಿಹಾರ ನೀಡಲಾಗುತ್ತದೆ. ಆದರೆ, ಬರ ಘೋಷಣೆಗೆ ಶೇಕಡ 59ರಷ್ಟು ಬೆಳೆ ಹಾನಿಯಾಗಿರಬೇಕು ಎಂಬ ಮಾನದಂಡ ಇದೆ. ಇದರಿಂದ ರೈತರಿಗೆ ಬರ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಶೇಕಡ 50ರಷ್ಟು ಇರುವುದನ್ನು ಶೇಕಡ 33ಕ್ಕೆ ಇಳಿಕೆ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬರ ನಿರ್ವಹಣೆ 2016 ನಿಯಮದಡಿ ಬರ ಘೋಷಣೆ ಮಾಡಲು ಕಠಿಣ ಮಾನದಂಡಗಳಿವೆ. ಈ ಕಠಿಣ ಮಾನದಂಡವನ್ನು ಸಡಿಲುಸುವುದು ಅತ್ಯಗತ್ಯವಾಗಿದೆ. ಜತೆಗೆ, ಬರಪರಿಹಾರಕ್ಕೆ ಕೇಂದ್ರಶೇಕಡ 75ರಷ್ಟು ಅನುದಾನ ನೀಡಿದರೆ, ರಾಜ್ಯ ಸರಕಾರ ಶೇಕಡ 25ರಷ್ಟು ಅನುದಾನ ನೀಡಲಿದೆ. ಹೀಗಾಗಿ ಕೇಂದ್ರದ ಷರತ್ತುಗಳನ್ನು ಪಾಲನೆ ಮಾಡಬೇಕಾದ ಅನಿವಾರ್ಯತೆ ರಾಜ್ಯ ಸರಕಾರಕ್ಕಿದೆ. ರಾಜ್ಯದ ರೈತರಹಿತದೃಷ್ಟಿಯಿಂದ ಕೇಂದ್ರ ಸರಕಾರ ಷರತ್ತುಗಳನ್ನು ಸಡಿಲಿಕೆ ಮಾಡುವಂತೆ ಪತ್ರದ ಮೂಲಕ ಮುಖ್ಯಮಂತ್ರಿ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.