'ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು' ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಚಂದ್ರಶೇಖರ ಸ್ವಾಮೀಜಿ

Update: 2024-11-27 10:26 GMT

ಬೆಂಗಳೂರು: 'ಮುಸ್ಲಿಮರಿಗೆ ಮತದಾನ ಹಕ್ಕು ಇಲ್ಲದಂತೆ ಮಾಡಬೇಕು' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಇದೀಗ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸ್ವಾಮೀಜಿ, "ಮುಸಲ್ಮಾನರೂ ಸಹ ಈ ದೇಶದ ಪ್ರಜೆಗಳೇ. ಎಲ್ಲರಂತೆ ಅವರಿಗೂ ಮತದಾನದ ಹಕ್ಕು ಇರುತ್ತದೆ. ನಿನ್ನೆಯ ದಿನ ತಾನು ಬಾಯಿ ತಪ್ಪಿ ನೀಡಿದ ಹೇಳಿಕೆಯಿಂದ ಮುಸಲ್ಮಾನ ಸಹೋದರರಿಗೆ ಬೇಸರವಾಗಿದ್ದರೆ, ಅದಕ್ಕಾಗಿ ಹೃತ್ತೂರ್ವಕವಾಗಿ ವಿಷಾದ ವ್ಯಕ್ತಪಡಿಸುತ್ತೇವೆ." ಎಂದು ಹೇಳಿದ್ದಾರೆ.

"ಮೂಲತಃ ಒಕ್ಕಲಿಗರು ಧರ್ಮ ಸಹಿಷ್ಣುಗಳು. ನಾವು ಎಲ್ಲಾ ಧರ್ಮದವರನ್ನು ಇಲ್ಲಿಯವರೆಗೂ ಸಮಾನವಾಗಿಯೇ ಕಂಡಿರುತ್ತೇವೆ. ನಮ್ಮ ಶ್ರೀಮಠಕ್ಕೆ ಮುಸ್ಲಿಮರು ಸಹ ಸಂಪರ್ಕವಿಟ್ಟುಕೊಂಡು ಬಂದು ಹೋಗುತ್ತಿರುತ್ತಾರೆ. ನಾವು ಸಹ ಮುಸ್ಲಿಮರ ಮದುವೆ ಹಾಗೂ ಇತರ ಶುಭ ಸಮಾರಂಭಗಳಲ್ಲಿ ಭಾಗಿಯಾಗಿರುತ್ತೇವೆ. ಆದ್ದರಿಂದ ಈ ಜನಾಂಗದ ಬಗ್ಗೆ ಯಾವುದೇ ಅಸಹಿಷ್ಣುತೆ ಹೊಂದಿಲ್ಲ" ಎಂದು ಸ್ಪಷ್ಟನೆ ನೀಡಿರುವ ಸ್ವಾಮೀಜಿ, ಆ ಹೇಳಿಕೆ ವಿಚಾರವನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.

ಏನಿದು ವಿವಾದ?

ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶವು ಆಯೋಜಿಸಿದ್ದ ರೈತ ಘರ್ಜನಾ ರ್ಯಾ ಲಿಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಚಂದ್ರಶೇಖರನಾಥ ಸ್ವಾಮೀಜಿ, 'ಮುಸ್ಲಿಮರಿಗೆಮತದಾನದ ಹಕ್ಕು ಇಲ್ಲದಂತೆ ಕಾನೂನು ಮಾಡಬೇಕು ಹಾಗೂ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು' ಎಂದು ಹೇಳಿದ್ದರು.

ಸ್ವಾಮೀಜಿಯ ಈ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ರಾಜಕೀಯ ನಾಯಕರಿಂದ ಹಿಡಿದು ಸಾರ್ವಜನಿಕರು ಸ್ವಾಮೀಜಿ ಹೇಳಿಕೆಯನ್ನು ಖಂಡಿಸಿದ್ದರು.  ತಮ್ಮ ಹೇಳಿಕೆ ವಿವಾದರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಚಂದ್ರಶೇಖರನಾಥ ಸ್ವಾಮೀಜಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ವಿವಾದ ವಿಚಾರವನ್ನು ಬೆಳಸದೆ, ಅಲ್ಲಿಗೇ ಮುಕ್ತಾಯೊಳಿಸುವಂತೆ ಮನವಿ ಮಾಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News