ಸಮಗ್ರ ಸಹಭಾಗಿತ್ವ ವಾರ್ಷಿಕ ಕ್ರಿಯಾ ಯೋಜನೆ ಸಿದ್ದಪಡಿಸಿ : ಗ್ರಾಮ ಪಂಚಾಯತ್‌ಗಳಿಗೆ ಪ್ರಿಯಾಂಕ್ ಖರ್ಗೆ ಸೂಚನೆ

Update: 2025-01-10 16:47 GMT

 ಪ್ರಿಯಾಂಕ್ ಖರ್ಗೆ

ಬೆಂಗಳೂರು : ಗ್ರಾಮ ಪಂಚಾಯತ್‌ ದೂರದೃಷ್ಟಿ ಯೋಜನೆ ಆಧರಿಸಿ 2025-26ನೇ ಸಾಲಿನ ಸಮಗ್ರ ಸಹಭಾಗಿತ್ವ ವಾರ್ಷಿಕ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಲು ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಗೆ ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಶುಕ್ರವಾರ ಈ ಬಗ್ಗೆ ಮಾಧ್ಯಮ ಪ್ರಕಟನೆ ನೀಡಿರುವ ಅವರು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 309(ಬಿ)ರಡಿಯಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಮುಂದಿನ ಐದು ವರ್ಷದ ದೂರದೃಷ್ಟಿ ಯೋಜನೆಯನ್ನು ಗ್ರಾಮ ಯೋಜನಾ ಸಮಿತಿ ಮತ್ತು ಗ್ರಾಮ ಪಂಚಾಯಿತಿ ಯೋಜನಾ ಸಮಿತಿಗಳ ಸಹಕಾರದೊಂದಿಗೆ ಸಿದ್ದಪಡಿಸಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ದೂರದೃಷ್ಟಿ ಯೋಜನೆಯಲ್ಲಿ 9 ಆದ್ಯತಾ ವಲಯಗಳನ್ನು ಗುರುತಿಸಲಾಗಿದ್ದು, ಅದಕ್ಕೆ ಪೂರಕವಾದ ಎಲ್ಲಾ ಚಟುವಟಿಕೆಗಳನ್ನು ಯೋಜನೆಯಲ್ಲಿ ಗುರುತಿಸಿ 2023-24ನೇ ಸಾಲಿನಿಂದ 2028-29ನೇ ಸಾಲಿನವರೆಗೆ ದೂರದೃಷ್ಟಿ ಯೋಜನೆಯನ್ನು ಸಿದ್ದಪಡಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ದೂರದೃಷ್ಟಿ ಯೋಜನೆ ಆಧರಿಸಿ ಗ್ರಾಮ ಪಂಚಾಯಿತಿಗಳು ಸಮಗ್ರ ಭಾಗವಹಿಸುವಿಕೆಯನ್ನು ಒಳಗೊಂಡ ವಾರ್ಷಿಕ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಬೇಕು, ಅದಕ್ಕೂ ಮುನ್ನ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುವ ಸಲುವಾಗಿ ಸರಣಿ ಚಟುವಟಿಕೆಗಳನ್ನು ಅಭಿಯಾನದ ರೂಪದಲ್ಲಿ ಹಮ್ಮಿಕೊಳ್ಳಬೇಕು ಎಂದೂ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

2025-26ನೇ ಸಾಲಿನ ಸಮಗ್ರ ಸಹಭಾಗಿತ್ವ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸುವ ಸಂದರ್ಭದಲ್ಲಿ ವಾರ್ಷಿಕ ಕ್ರಿಯಾ ಯೋಜನೆಯ ಎಲ್ಲಾ ಚಟುವಟಿಕೆಗಳನ್ನು ಗ್ರಾಮ ಪಂಚಾಯಿತಿಗಳ ಐದು ವರ್ಷದ ದೂರದೃಷ್ಟಿ ಯೋಜನೆಯ ಗುರಿಯ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ದಪಡಿಸಬೇಕು. ಸಮುದಾಯದ ಸಹಭಾಗಿತ್ವದೊಂದಿಗೆ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸಲು ಕ್ರಮ ವಹಿಸಬೇಕು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿಯ ಎಲ್ಲಾ ಅನುದಾನದ ಮೂಲಗಳು ಒಳಗೊಂಡಂತೆ ಒಂದು ಸಮಗ್ರ ಸಹಭಾಗಿತ್ವ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆಯಲ್ಲಿ ಇರುವಂತೆ ಗ್ರಾಮ ಪಂಚಾಯಿತಿ ಹಂತದ ಇತರೆ ಅಭಿವೃದ್ಧಿ ಇಲಾಖೆಗಳ ಅನುದಾನ, ಯೋಜನೆಗಳು, ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಗ್ರಾಮ ಪಂಚಾಯಿತಿ ಹಂತದಲ್ಲಿ ಕೈಗೊಳ್ಳಲಾಗುವ ಕಡಿಮೆ ಖರ್ಚಿನಲ್ಲಿ ನಿರ್ವಹಿಸುವ ಚಟುವಟಿಕೆಗಳು ಹಾಗೂ ವೆಚ್ಚಗಳನ್ನು ಭರಿಸದೆ ಕೈಗೊಳ್ಳಬಹುದಾದ ಚಟುವಟಿಕೆಗಳನ್ನು ಗುರುತಿಸಬೇಕು. ಯೋಜನಾವಾರು ಅವಶ್ಯವಿರುವ ಚಟುವಟಿಕೆಗಳನ್ನು ಕಡ್ಡಾಯವಾಗಿ ಸಮಗ್ರ ಸಹಭಾಗಿತ್ವ ವಾರ್ಷಿಕ ಕ್ರಿಯಾ ಯೋಜನೆಯ ಅಂಗವಾಗಿರುವುದನ್ನು ಖಾತರಿಪಡಿಸಿಕೊಂಡು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಗ್ರಾಮ ಪಂಚಾಯತ್‌ ಗಳಿಗೆ ಪ್ರಕಟನೆಯಲ್ಲಿ ಸೂಚಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News