ಜಾತ್ಯತೀತತೆ ಸೌಹಾರ್ದ ಮೌಲ್ಯಗಳು ಮರೆಯಾಗುತ್ತಿವೆ : ಡಾ.ಪುರುಷೋತ್ತಮ ಬಿಳಿಮಲೆ

Update: 2025-01-09 16:48 GMT

ಬೆಂಗಳೂರು : ಇಂದು ಧರ್ಮನಿರಪೇಕ್ಷತೆ, ಜಾತ್ಯಾತೀತತೆ ಸೌಹಾರ್ದದಂತಹ ಮೌಲ್ಯಗಳು ಮರೆಯಾಗುತ್ತಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ಗುರುವಾರ ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಶೂದ್ರ ಪ್ರತಿಷ್ಠಾನ ಮತ್ತು ಕನ್ನಡ ಅಧ್ಯಯನ ಕೇಂದ್ರ ಬೆಂಗಳೂರು ವಿವಿ ವತಿಯಿಂದ ‘ಕನ್ನಡ ಸಾಹಿತ್ಯ-ಸಂವಿಧಾನದ ಆಶಯಗಳು’ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಸಂವಿಧಾನದ ವಿಶ್ವದ ಶ್ರೇಷ್ಠ ಸಂವಿಧಾನ. ಅದರಲ್ಲಿ ಎಲ್ಲರೂ ಒಳಗೊಳ್ಳುವ ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ, ಒಕ್ಕೂಟ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದ ತಳಹದಿಯಲ್ಲಿ ತಾತ್ವಿಕ ಚೌಕಟ್ಟನ್ನು ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟರು.

ಸಂವಿಧಾನದ ಆಶಯಗಳನ್ನು ಸಾಹಿತ್ಯದಲ್ಲಿ ಹುಡುಕಾಟ ಮಾಡುತ್ತಿರುವುದು ನಿಜಕ್ಕೂ ಇವತ್ತಿನ ತುರ್ತು ಆಗಿದೆ. ಅಲ್ಲದೇ ಸಾಹಿತ್ಯ ಎಂಬುದು ವೈಯಕ್ತಿಕ ಸೃಷ್ಟಿ. ಸಂವಿಧಾನ ಸಮೂಹ ಸೃಷ್ಟಿ. ಇದನ್ನು ಎರಡು ಸಾವಿರ ವರ್ಷಗಳ ಹಿಂದಿನ ಸಾಹಿತ್ಯದಲ್ಲಿಯೇ ಇತ್ತು ಎಂದು ಭಾವಿಸಿದರೆ ಅದು ಮೂಲಭೂತವಾದಿ ನೋವಾಗುತ್ತದೆ. ಇದನ್ನು ಸೂಕ್ಷ್ಮವಾಗಿ ಗ್ರಹಿಸಬೇಕಾಗುತ್ತದೆ. ಸಂವಿಧಾನದ ಕೆಲವು ಪರಿಕಲ್ಪನೆಗಳು ಪಂಪನ ಹಾದಿಯಿಂದ ಈತನಕವೂ ವ್ಯಕ್ತವಾಗುತ್ತಿವೆ ಎಂದು ತಿಳಿಸಿದರು.

ವಚನ ಚಳುವಳಿಯ ಬಹುದೊಡ್ಡ ಯಶಸ್ಸು ಎಂದರೆ ವೈದಿಕ ಪರಂಪರೆಯು ದೈವದೊಟ್ಟಿಗೆ ಕೇವಲ ಸಂಸ್ಕೃತ ಭಾಷೆಯಲ್ಲಿ ಸಂವಹನ ಮಾಡುತ್ತಿರುವ ಸಂದರ್ಭದಲ್ಲಿ ದೇವರುಗಳಿಗೆ ಕನ್ನಡ ಭಾಷೆಯನ್ನು ಕಲಿಸುವ ಮೂಲಕ ಹೊಸ ಸಮಾಜದ ಕಲ್ಪನೆಯನ್ನು ಬಿತ್ತಿದರು ಎಂದು ತಿಳಿಸಿದರು.

ಹಿರಿಯ ಸಾಹಿತಿ ಡಾ.ಎಲ್.ಹನುಮಂತಯ್ಯ ಮಾತನಾಡಿ, ರಾಷ್ಟ್ರವೆಲ್ಲವೂ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಚಿಂತಿಸುತ್ತಿರುವಾದ ಕುವೆಂಪು ಅವರು ಜಲಗಾರನ ಬಗ್ಗೆ ಚಿಂತಿಸಿರುವುದು, ಕಾರಂತರು ಚೋಮ ಭೂಮಿಯ ಬಗ್ಗೆ ಕನಸು ಕಾಣುವುದು, ಅಥವಾ ಪ್ರಗತಿಶೀಲರ ಮಾಕ್ರ್ಸ್‍ವಾದಿ ಚಿಂತನೆ, ಸಮಾಜವಾದದ ಚಿಂತನೆ, ನವ್ಯ ಸಾಹಿತಿಗಳ ಪ್ರಜ್ಞೆಯಾಗಿದೆ. ಇದಾದ ನಂತರ ದಲಿತ ಬಂಡಾಯ ಸಾಹಿತ್ಯ ವಾಸ್ತವದ ಭಾರತವನ್ನು ತೆರೆದಿಡುವ ಪ್ರಯತ್ನವನ್ನು ಮಾಡುತ್ತಾ ಬಂತು ಇದಕ್ಕೆ ಅಂಬೇಡ್ಕರ್ ಅವರ ಸಂವಿಧಾನದ ಪ್ರೇರಣೆ ಮತ್ತು ಪ್ರಭಾವ ಹೆಚ್ಚಿತ್ತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಡಿ.ಡೊಮಿನಿಕ್, ಶೂದ್ರ ಪ್ರತಿಷ್ಠಾನದ ಅಧ್ಯಕ್ಷ ಡಾ.ಲಕ್ಷ್ಮೀನಾರಾಯಣಸ್ವಾಮಿ, ಪ್ರಾಧ್ಯಾಪಕ ಡಾ.ಬಿ.ಗಂಗಾಧರ ಮತ್ತಿತರರು ಉಪಸ್ಥಿತರಿದ್ದರು.

‘ದೇಶಕ್ಕೆ ಸ್ವಾತಂತ್ರ್ಯ ಬರುವವರೆಗೂ ಇದ್ದದ್ದು (ಮನುಸ್ಮೃತಿ) ಮನುವಿನ ಸಂವಿಧಾನ ಅದನ್ನು ಒಡೆದು ಹಾಕಿದ್ದು. ಅಂಬೇಡ್ಕರ್ ಅವರ ಸಂವಿಧಾನ. ಈ ಸಂವಿಧಾನವು ಎಲ್ಲರನ್ನೂ ಒಳಗೊಳ್ಳುವ ಆಶಯವನ್ನು ಹೊಂದಿದೆ’

-ಡಾ.ಕೆ.ಶರೀಫಾ, ಕವಯತ್ರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News