ಪ್ರೊ.ಮುಝಫರ್ ಅಸ್ಸಾದಿಯವರನ್ನು ಕುಲಪತಿಯನ್ನಾಗಿಸದಿರುವುದು ವ್ಯವಸ್ಥೆಗೆ ಆದ ನಷ್ಟ : ಡಾ.ಕಿರಣ್ ಗಾಜನೂರು
ಬೆಂಗಳೂರು : ಹಿರಿಯ ಚಿಂತಕ ಮುಝಫರ್ ಅಸ್ಸಾದಿ ಅವರಿಗೆ ತಾವು ಕುಲಪತಿ ಆಗಬೇಕು ಎನ್ನುವ ಆಸೆ ಇರಲಿಲ್ಲ. ಆದರೆ, ಅವರಿಗೆ ಆ ಅರ್ಹತೆ ಇತ್ತು. ಅದನ್ನು ನಿರಾಕರಿಸಿರುವುದು ವ್ಯವಸ್ಥೆಗೆ ಆದ ನಷ್ಟವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿವಿಯ ಪ್ರಾಧ್ಯಾಪಕ ಡಾ.ಕಿರಣ್ ಗಾಜನೂರು ತಿಳಿಸಿದ್ದಾರೆ.
ಶುಕ್ರವಾರ ನಗರದ ಸಾಲಾರ್ ಆಡಿಟೋರಿಯಂನಲ್ಲಿ ನಡೆದ ಪ್ರೊ.ಮುಝಫರ್ ಅಸ್ಸಾದಿ ಒಂದು ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರೊ.ಮುಝಫರ್ ಅಸ್ಸಾದಿ ಅವರು ತಮ್ಮ ಬರಹಗಳಲ್ಲಿ ಜಾತ್ಯತೀತತೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಲಿಂಗಸಮಾನತೆಯನ್ನು ಪ್ರತಿಪಾದಿಸಿದ್ದಾರೆ. ಮುಝಫರ್ ಅಸ್ಸಾದಿ ಅವರ ನಿಧನ ಕರ್ನಾಟಕ ರಾಜಕೀಯ ಚಿಂತನೆಗೆ ಆದ ನಷ್ಟವಾಗಿದೆ. ಅವರು ಬರೆದಿರುವ ಚಿಂತನೆಗಳನ್ನು ಚರ್ಚಿಸಬೇಕಾಗಿದೆ ಎಂದು ಹೇಳಿದರು.
ಕರ್ನಾಟಕದ ರಾಜ್ಯಶಾಸ್ತ್ರದ ಚಿಂತನೆಯನ್ನು ಬರೆಯುವ ವಿದ್ವಾಂಸರೂ ಈಗ ಯಾರೂ ಇಲ್ಲವಾಗಿದೆ. ಅವರನ್ನು ಒಂದು ಆಲೋಚನಾ ಕ್ರಮವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು.
ಲೇಖಕಿ ಪ್ರೊ.ಶಾಕಿರಾ ಖಾನಂ ಮಾತನಾಡಿ, ಮುಝಫರ್ ಅಸ್ಸಾದಿ ಅವರನ್ನು ವಿಶ್ವ ವಿದ್ಯಾಲಯದ ಕುಲಪತಿಯನ್ನಾಗಿ ಮಾಡದಿರುವುದು, ಅವರಿಗೆ ಮಾಡಿದ ಅಪಮಾನ ಮಾತ್ರವಲ್ಲದೇ ಒಂದು ಸಮುದಾಯಕ್ಕೆ ಮಾಡಿರುವ ಅಪಮಾನವಾಗಿದೆ. ಅಲ್ಪಸಂಖ್ಯಾತ ಸಮುದಾಯದಲ್ಲಿ ಅಸ್ಸಾದಿ ಅವರಂಥ ವಿದ್ವತ್‌ಪೂರ್ಣ ವ್ಯಕ್ತಿ ಬರುವುದು ಬಹಳ ಕಡಿಮೆ. ಶೇಖ್ ಅಲಿ, ಕನ್ನಡ ಸಾಹಿತ್ಯದಲ್ಲಿ ಕೆ.ಎಸ್.ನಿಸಾರ್ ಅಹ್ಮದ್ ಅವರು ಇದ್ದರು. ಅಂತವರ ಸಾಲಿನಲ್ಲಿ ಮುಝಫರ್ ಅಸ್ಸಾದಿ ಒಬ್ಬರೂ ಎಂದು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ಮುಝಫರ್ ಅಸ್ಸಾದಿ ಅವರು ಕೇವಲ ಮುಸ್ಲಿಂ ಸಮುದಾಯದ ಬಗ್ಗೆ ಮಾತ್ರ ಮಾತನಾಡಿಲ್ಲ. ಒಟ್ಟು ಸಮಾಜದ ಬಗ್ಗೆ ಮಾತಾಡಿದ್ದಾರೆ. ಮುಝಫರ್ ಅಸ್ಸಾದಿ ಅವರು ಬಹಳ ನೇರವಾಗಿ ಮಾತನಾಡುತ್ತಿದ್ದರು. ನಮ್ಮಲ್ಲಿ ಬಹಳಷ್ಟು ಬುದ್ಧಿಜೀವಿಗಳು ಇದ್ದಾರೆ. ಆದರೆ ಸತ್ಯ ಹೇಳುವ ಧೈರ್ಯ ಎಲ್ಲರಲ್ಲೂ ಇಲ್ಲ. ಒಬ್ಬ ಬುದ್ಧಿ ಜೀವಿಗೆ ಸತ್ಯ ಹೇಳುವ ದೈರ್ಯ ಇರಬೇಕು ಎಂದು ತಿಳಿಸಿದರು.
ವಿಶ್ವವಿದ್ಯಾಲಯಗಳಲ್ಲಿನ ಪ್ರೊಫೆಸರ್‌ಗಳು ತರಗತಿಗೆ ಮಾತ್ರ ಸೀಮಿತವಾಗಿದ್ದಾರೆ. ಮುಝಫರ್ ಅಸ್ಸಾದಿ ಅವರಿಗೆ ಮಾನಸಿಕವಾದ ಶಕ್ತಿ ಇತ್ತು. ಒಂದು ಕಾಲದಲ್ಲಿ ಮುಸ್ಲಿಂ ಸಮುದಾಯದಲ್ಲಿ ಪ್ರಶ್ನಿಸುವ ಸಾಹಿತಿಗಳು ಇದ್ದರೂ, ಈಗ ಅವರೂ ಕೂಡ ಮೌನವಾಗಿದ್ದಾರೆ. ಒಬ್ಬ ವಿದ್ವಾಂಸನ ಸಾವು ಬಹಳ ಸಂಕಟದಿಂದ ಕೂಡಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಝಫರ್ ಅಸ್ಸಾದಿ ಅವರು ಬೀದಿಯಲ್ಲಿ ನಿಂತೂ ಮಾತಾಡುತ್ತಿದ್ದರು. ತರಗತಿಗಳಲ್ಲಿಯೂ ಮಾತನಾಡುತ್ತಿದ್ದರು. ಅಂತರ್ ರಾಷ್ಟ್ರಿಯ ವೇದಿಕೆಯಲ್ಲಿಯೂ ಮಾತನಾಡುತ್ತಿದ್ದರು. ಈ ಬಾರಿ ಕುಲಪತಿಯನ್ನಾಗಿ ಮಾಡಲು ಮುಝಫರ್ ಅಸ್ಸಾದಿ ಅವರ ಹೆಸರು ಇತ್ತು. ಆದರೆ ರಾಜ್ಯಪಾಲರು ಅದೊಂದು ಹೆಸರು ಬಿಟ್ಟು ಬೇರೆ ಯಾವ ಹೆಸರು ಬೇಕಾದರೂ ಹೇಳಿ ಎಂದಿದ್ದರು. ಕೊನೆಗೆ ಕುವೆಂಪು ವಿಶ್ವವಿದ್ಯಾಲಯಕ್ಕೆ ಆದರೂ ಕುಲಪತಿಯನ್ನಾಗಿ ಮಾಡಿ ಎಂದು ಸಿಎಂ ಕೇಳಿದರೂ ಕೂಡ ಅದು ಆಗಲಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ವಿಖಾರ್ ಅಹ್ಮದ್ ಸಯೀದ್, ಹರಿಪ್ರಸಾದ್, ಪ್ರಾಧ್ಯಾಪಕ ಪ್ರೊ.ಎಸ್.ವೈ.ಸುರೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.