ಸಿಐಡಿ ಮುಂದೆ ಸಿಟಿ ರವಿ ಹಾಜರು

Update: 2025-01-09 17:21 GMT

ಬೆಂಗಳೂರು : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಮತ್ತು ಹಲ್ಲೆ ಯತ್ನ ಪ್ರಕರಣ ಸಂಬಂಧ ವಿಧಾನಸಭಾ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಸಿಐಡಿ ಮುಂದೆ ಹಾಜರಾಗಿದ್ದಾರೆ.

ಗುರುವಾರ ಇಲ್ಲಿನ ಅರಮನೆ ಮುಖ್ಯರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ಆಗಮಿಸಿದ ಸಿ.ಟಿ.ರವಿ ಪ್ರಕರಣ ಸಂಬಂಧ ತಮ್ಮ ಹೇಳಿಕೆಯನ್ನು ತನಿಖಾಧಿಕಾರಿಗಳ ಮುಂದೆ ದಾಖಲಿಸಿದರು.

ತನಿಖಾಧಿಕಾರಿ ಮುಂದೆ ವಿಚಾರಣೆಗೆ ಜ.6ರಂದು ಗೈರಾಗಿದ್ದ ಹಿನ್ನೆಲೆಯಲ್ಲಿ ಸಿ.ಟಿ.ರವಿ ಅವರಿಗೆ ಇಂದು ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಸಂಬಂಧ ಸಿ.ಟಿ. ರವಿ ಅವರು ತನಿಖಾಧಿಕಾರಿ ಕೇಶವಮೂರ್ತಿ ಮುಂದೆ ಹಾಜರಾಗಿ 1 ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.

ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ.ರವಿ, ಚಳಿಗಾಲ ಅಧಿವೇಶನದ ಕೊನೆ ದಿನವಾಗಿದ್ದ ಡಿ.19ರಂದು ಸುವರ್ಣಸೌಧದ ಪಶ್ಚಿಮ ದ್ವಾರದ ಬಳಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಅಂದು ಸಂಜೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಜೊತೆ ಚರ್ಚೆ ನಡೆಸಿ ಪರಿಷತ್ ಕಡೆ ಬರುವ ಮೊಗಸಾಲೆ ಬಳಿ ಹಲ್ಲೆಗೆ ಯತ್ನಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಸಿಐಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೇನೆ ಎಂದರು.

ಏನಿದು ಪ್ರಕರಣ?: ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಸಿ.ಟಿ.ರವಿ ಅವರಿಗೆ ಜೀವ ಬೆದರಿಕೆ ಹಾಕಿರುವ ಸಂಬಂಧ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ಸಲ್ಲಿಸಲಾಗಿತ್ತು. ಆನಂತರ ಸಭಾಪತಿ ಕಾರ್ಯದರ್ಶಿ ಮೂಲಕ ಹಿರೇಬಾಗೇವಾಡಿ ಪೊಲೀಸರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಪ್ರಕರಣ ಸಿಐಡಿಗೆ ಹಸ್ತಾಂತರ ಆಗಿದ್ದರಿಂದ ಸಿಐಡಿ ತನಿಖೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News