ಕಾಲ್ತುಳಿತ ಪ್ರಕರಣ | ತಿರುಪತಿಗೆ ಹೋಗಿರುವ ರಾಜ್ಯದವರಿಗೆ ತೊಂದರೆಯಾಗಿಲ್ಲ: ರಾಮಲಿಂಗಾರೆಡ್ಡಿ
ಬೆಂಗಳೂರು : ಕರ್ನಾಟಕದಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿರುವ ಭಕ್ತರಿಗೆ ಯಾವುದೇ ತೊಂದರೆಯಾಗಿಲ್ಲ. ಭಕ್ತರಿಗೆ ಮೂಲ ಸೌಕರ್ಯ ಒದಗಿಸುವಂತೆ ಅಲ್ಲಿನ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರುಪತಿಯಲ್ಲಿ ಕಾಲ್ತುಳಿತದಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಇಂದು(ಜ.10) ತಿರುಪತಿಯಲ್ಲಿ ವೈಕುಂಠ ಏಕಾದಶಿ ಇರುವುದರಿಂದ ಕರ್ನಾಟಕದಿಂದಲೂ ತಿಮ್ಮಪ್ಪನ ದರ್ಶನಕ್ಕೆ ಹೆಚ್ಚಿನ ಭಕ್ತರು ಹೋಗಿದ್ದಾರೆ. ಎಚ್ಚರಿಕೆ ವಹಿಸುವಂತೆ ಅಲ್ಲಿನ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದರು.
ಭಕ್ತರಿಗೆ ಅಗತ್ಯವಾದ ಮೂಲ ಸೌಕರ್ಯ ಒದಗಿಸುವಂತೆ ಸೂಚಿಸಿದ್ದೇನೆ. ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲವೆಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಆಡಳಿತ ಮಂಡಳಿ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ರಾಮಲಿಂಗಾರೆಡ್ಡಿ ಹೇಳಿದರು.