ಸಮಾಜ ಕಲ್ಯಾಣ ಇಲಾಖೆಯ ಐದು ಹಾಸ್ಟೆಲ್‍ಗಳ ಆಹಾರ ಅಸುರಕ್ಷಿತ; ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ

Update: 2025-01-08 17:22 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯಡಿ ಬರುವ 331 ಹಾಸ್ಟೆಲ್‍ಗಳ ಆಹಾರ ಮಾದರಿಗಳನ್ನು ಪರೀಕ್ಷೆ ಒಳಪಡಿಸಿದ್ದು, 234 ಸುರಕ್ಷಿತ, 5 ಆಹಾರದ ಮಾದರಿಗಳು ಅಸುರಕ್ಷಿತ ಮತ್ತು 5 ಹಾಸ್ಟೆಲ್‍ಗಳ ಆಹಾರ ಮಾದರಿಗಳು ನಿಗದಿತ ಗುಣಮಟ್ಟ ಹೊಂದಿಲ್ಲವೆಂಬ ವರದಿ ಬಂದಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ.

ಬುಧವಾರ ಆಹಾರ ಇಲಾಖೆ ಆಯುಕ್ತರು ಪ್ರಕಟನೆ ಹೊರಡಿಸಿದ್ದು, 2024ರ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ನೈರ್ಮಲ್ಯತೆ ಮತ್ತು ಶುಚಿತ್ವಕ್ಕೆ ಸಂಬಂಧಿಸಿದಂತೆ ಲೋಪಗಳು ಕಂಡುಬಂದ ಉದ್ದಿಮೆಗಳಿಗೆ ಹಾಗೂ ಹಾಸ್ಟೆಲ್‍ಗಳಿಗೆ ನೋಟಿಸ್‍ನ್ನು ಜಾರಿಗೊಳಿಸಿ ಅಗತ್ಯ ಕ್ರಮಗಳನ್ನು ಜರುಗಿಸಲಾಗಿದೆ.

341 ಪಿಜಿಗಳಿಗೆ ಭೇಟಿ ನೀಡಿ 65 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 54 ಮಾದರಿಗಳು ಸುರಕ್ಷಿತ, ಒಂದು ಮಾದರಿಯು ಅಸುರಕ್ಷಿತ, ಎರಡು ಮಾದರಿಗಳು ನಿಗದಿತ ಗುಣಮಟ್ಟ ಹೊಂದಿಲ್ಲವೆಂಬ ವರದಿ ಬಂದಿದೆ ಎಂದಿದ್ದಾರೆ.

ರಾಜ್ಯದ 629 ಹಿಂದುಳಿದ ವರ್ಗಗಳ ಹಾಸ್ಟೆಲ್‍ಗಳಿಗೆ ಭೇಟಿ ನೀಡಿ 1,378 ಆಹಾರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 1,280 ಮಾದರಿಗಳು ಸುರಕ್ಷಿತ, 42 ಮಾದರಿಗಳು ಅಸುರಕ್ಷಿತ ಮತ್ತು 56 ಮಾದರಿಗಳು ನಿಗದಿತ ಗುಣಮಟ್ಟ ಹೊಂದಿಲ್ಲ. 188 ಇಂದಿರಾ ಕ್ಯಾಂಟೀನ್‍ಗಳ ಪೈಕಿ 212 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 191 ಮಾದರಿಗಳು ಸುರಕ್ಷಿತ, 4 ಮಾದರಿಗಳು ಅಸುರಕ್ಷಿತ, 13 ಮಾದರಿಗಳು ನಿಗದಿತ ಗುಣಮಟ್ಟ ಹೊಂದಿಲ್ಲ ಎಂದು ಹೇಳಿದ್ದಾರೆ.

ಕ್ರಿಸ್‍ಮಸ್ ಮತ್ತು ಹೊಸವರ್ಷದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೇಕ್‍ಗಳು ಮಾರಾಟದ ಹಿನ್ನೆಲೆಯಲ್ಲಿ ಅವುಗಳ ಗುಣಮಟ್ಟ ಪರಿಶೀಲಿಸುವ ಸಂಬಂಧ 438 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿತ್ತು. ಅವುಗಳಲ್ಲಿ 156 ಮಾದರಿಗಳ ವಿಶ್ಲೇಷಣಾ ಕಾರ್ಯವು ಮುಕ್ತಾಯಗೊಂಡಿದ್ದು, 154 ಮಾದರಿಗಳು ಸುರಕ್ಷಿತ, 2 ಮಾದರಿಗಳು ಅಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿಕ ಮಾದರಿಗಳ ವಿಶ್ಲೇಷಣಾ ಪ್ರಕ್ರಿಯೆಯು ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News