ಕಮಿಷನ್ ಬಗ್ಗೆ ಕುಮಾರಸ್ವಾಮಿ ಹೇಳಿಕೆ ಉದ್ಧಟತನದ ಪರಮಾವಧಿ : ಸಲೀಂ ಅಹ್ಮದ್

Update: 2025-01-07 17:50 GMT

ಸಲೀಂ ಅಹ್ಮದ್

ಬೆಂಗಳೂರು : ರಾಜ್ಯ ಸರಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಮಾಡಿರುವ ಆರೋಪ ನಿರಾಧಾರ. ಕಮಿಷನ್ ಬಗ್ಗೆ ಅವರು ನೀಡಿರುವ ಹೇಳಿಕೆ ಉದ್ಧಟತನದ ಪರಮಾವಧಿ ಎಂದು ವಿಧಾನಪರಿಷತ್‍ನ ಸರಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಕಿಡಿಕಾರಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮಾಡಿರುವ ಆರೋಪಗಳು ಗಾಳಿಯಲ್ಲಿ ಗುಂಡು ಹಾರಿಸಿದಂತಿದೆ. ಅವರು ತಮ್ಮ ಆರೋಪಗಳನ್ನು ದಾಖಲೆಗಳ ಸಮೇತ ಸಾಬೀತು ಪಡಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ 5 ಗ್ಯಾರಂಟಿಗಳ ಮೂಲಕ ಜನಪರ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರದ ಬಗ್ಗೆ ಟೀಕಿಸಲು ವಿಷಯಗಳೇ ಇಲ್ಲದೆ ಕುಮಾರಸ್ವಾಮಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಆಧಾರವಿಲ್ಲದ ಆರೋಪಗಳನ್ನು ಮಾಡಿ ಜನರ ದಿಕ್ಕು ತಪ್ಪಿಸುವುದೇ ಬಿಜೆಪಿ ಹಾಗೂ ಜೆಡಿಎಸ್ ನ ಬಂಡವಾಳ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸರಕಾರದ ಸಂಕಲ್ಪ. ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ರೂಪಿಸುವುದೇ ನಮ್ಮ ಉದ್ದೇಶ ಎಂದು ಸಲೀಂ ಅಹ್ಮದ್ ಹೇಳಿದರು.

ರಾಜ್ಯವನ್ನು ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಸಲು ಕಾಂಗ್ರೆಸ್ ಸರಕಾರ ಬದ್ಧವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಜನ ಸಾಮಾನ್ಯರ ಬದುಕಿನಲ್ಲಿ ಬದಲಾವಣೆ ಉಂಟಾಗಿದೆ. ವಿರೋಧ ಪಕ್ಷಗಳ ನಾಯಕರು ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮೇಲೆ ಆರೋಪ ಮಾಡುತ್ತಿದ್ದರು. ಅವರ ಸುಳ್ಳು, ಟೀಕೆ, ಅಪಪ್ರಚಾರಕ್ಕೆ ಉತ್ತರವಾಗಿ 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸುವ ಮೂಲಕ ಮತದಾರರು ಬಿಜೆಪಿ-ಜೆಡಿಎಸ್ ಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯದ ಸಮಗ್ರ ಕಲ್ಯಾಣಕ್ಕೆ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದೆ ಎಂದು ಸಲೀಂ ಅಹ್ಮದ್ ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News