ಪ್ರಿಯಾಂಕ್ ವಿರುದ್ಧದ ಪ್ರತಿಭಟನೆಯಲ್ಲಿ ಪಿಎಸ್ಸೈ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಭಾಗಿ : ಕಳಂಕಿತರಿಗೆ ಬಿಜೆಪಿಯ ಉನ್ನತ ಸ್ಥಾನಗಳನ್ನು ನೀಡಲಿ ಎಂದ ಕಾಂಗ್ರೆಸ್

Update: 2025-01-07 17:37 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ‘ಪಿಎಸ್ಸೈ ಹಗರಣದಲ್ಲಿ ಜೈಲು ಪಾಲಾಗಿ, ಜಾಮೀನಿನ ಮೇಲೆ ಹೊರಗಿರುವ ಬಿಜೆಪಿಯ ದಿವ್ಯಾ ಹಾಗರಗಿ ಜತೆಗೆ ಕಲಬುರ್ಗಿ ಪಾದಯಾತ್ರೆಯಲ್ಲಿ ಬೆವರು ಹರಿಸಿರುವ ಬಿಜೆಪಿ ನಾಯಕರು, ಕಳಂಕಿತರಿಗೆ ಬಿಜೆಪಿಯ ಉನ್ನತ ಸ್ಥಾನಗಳನ್ನು ನೀಡಿ, ತಮ್ಮ ಪಕ್ಷದ ಸಿದ್ದಾಂತವನ್ನು ಬಹಿರಂಗಪಡಿಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಮಂಗಳವಾರ ಈ ಸಂಬಂಧ ಪ್ರಕಟಣೆ ನೀಡಿರುವ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ‘ಮೂರನ್ನು ಬಿಟ್ಟವರು ಊರಿಗೆ ದೊಡ್ಡವರು’ ಎಂಬ ಗಾದೆ ಮಾತಿನಂತೆ ಬಿಜೆಪಿ ನಾಯಕರು ತಮ್ಮ ವರ್ತನೆಯನ್ನು ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಹೋರಾಟಗಳಿಗೆ ಕ್ರಿಮಿನಲ್ ಆರೋಪದ ಮುಖಂಡರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿರುವುದು ನಾಚಿಕೆಗೇಡಿನ ಪರಮಾವಧಿ. ಇಡೀ ರಾಷ್ಟ್ರ ನೋಡುವಂತೆ ಪಿಎಸ್ಸೈ ಹಗರಣದಲ್ಲಿ ಆರೋಪ ಹೊತ್ತಿದ್ದ ಬಿಜೆಪಿ, ತದನಂತರ ಸದರಿ ಪ್ರಕರಣವನ್ನು ಸಿಐಡಿಗೆ ನೀಡಿ ಕೈತೊಳೆದುಕೊಳ್ಳುವ ಪ್ರಯತ್ನವನ್ನು ಮಾಡಿತ್ತು’ ಎಂದು ದೂರಿದ್ದಾರೆ.

‘ಸಾವಿರಾರು ಯುವಕರ ಭವಿಷ್ಯವನ್ನು ಕಸಿದಂತಹ ಕರ್ನಾಟಕ ಪಿಎಸ್ಸೈ ಹಗರಣ, ಕಾಂಗ್ರೆಸ್ ಮತ್ತು ಪ್ರಿಯಾಂಕ ಖರ್ಗೆ ಪ್ರಯತ್ನದಿಂದ ಆಚೆ ಬಂದಿತ್ತು, ಇಡೀ ರಾಜ್ಯದಲ್ಲಿ ಒಬ್ಬ ಹಿರಿಯ ದರ್ಜೆಯ ಐಪಿಎಸ್ ಅಧಿಕಾರಿ ಮತ್ತು ಐಎಎಸ್ ಅಧಿಕಾರಿ ಅಮಾನತು ಶಿಕ್ಷೆಗೆ ಒಳಗಾದಂತಹ ಪ್ರಕರಣವಿದು. ಇದೇ ಪ್ರಕರಣದಲ್ಲಿ ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಮುಖ ಆರೋಪಿ ಬಿಜೆಪಿಯ ದಿವ್ಯ ಹಾಗರಗಿ ಮನೆಗೆ ಮತ್ತು ಶಾಲೆಗೆ ಭೇಟಿ ನೀಡಿದ ಭಾವಚಿತ್ರಗಳು ಮಾಧ್ಯಮದಲ್ಲಿ ಪ್ರಕಟಗೊಂಡಿದ್ದವು.

ಆಕೆಯ ಬಂಧನದ ನಂತರ ಬಿಜೆಪಿ ಆಕೆಯನ್ನು ಪಕ್ಷದಿಂದ ಉಚ್ಛಾಟಿಸಿರುವ ಹೇಳಿಕೆಯನ್ನು ನೀಡಿತ್ತು. ಆದರೆ, ಮತ್ತೆ ಕಲಬುರ್ಗಿ ಪ್ರತಿಭಟನೆಯಲ್ಲಿ ಆಕೆಗೆ ಆದ್ಯತೆ ನೀಡಿ ಅವರ ಜೊತೆಯಲ್ಲಿ ಬಿಜೆಪಿ ನಾಯಕರು ಬೀದಿ ಹೋರಾಟ ನಡೆಸಿರುವುದು ವಿಪರ್ಯಾಸ. ಬಿಜೆಪಿ ನಾಯಕರಿಗೆ ಕಳಂಕಿತರನ್ನು, ಆರೋಪಿತರನ್ನು ಮತ್ತು ಕ್ರಿಮಿನಲ್ ಹಿನ್ನೆಲೆ ಉಳ್ಳವರನ್ನೂ ತಮ್ಮ ಹೋರಾಟಗಳಲ್ಲಿ ಜೊತೆ ಜೊತೆಯಲಿ ಕರೆದುಕೊಂಡು ಹೋಗದೆ ಇದ್ದರೆ ಆತ್ಮತೃಪ್ತಿ ಇರುವುದಿಲ್ಲ ಎಂದು ರಮೇಶ್ ಬಾಬು ಟೀಕಿಸಿದ್ದಾರೆ.

‘ಕಳಂಕಿತರನ್ನು ಜೊತೆಯಲ್ಲಿ ಇಟ್ಟುಕೊಂಡು ಬಿಜೆಪಿ ನಾಯಕರು ಕಲಬುರ್ಗಿಯಲ್ಲಿ ಪ್ರತಿಭಟನೆಯನ್ನು ಮಾಡುವುದರ ಮೂಲಕ ಮತ್ತೊಮ್ಮೆ ತಮ್ಮ ವ್ಯಕ್ತಿತ್ವವನ್ನು ಮತ್ತು ಸಂಘ ಪರಿವಾರದ ಆದರ್ಶಗಳನ್ನು ಸಾಬೀತುಪಡಿಸಿಕೊಂಡಿದ್ದಾರೆ. ಕ್ರಿಮಿನಲ್ ಅಪರಾಧಿಗಳ ಜೊತೆ ಕಾಣಿಸಿಕೊಳ್ಳುವುದರ ಮೂಲಕ ತಮ್ಮ ಹವ್ಯಾಸವನ್ನು ಬೆತ್ತಲೆ ಗೊಳಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವು, ಬಿಜೆಪಿ ನಾಯಕರ ಇಂತಹ ನಡೆಯನ್ನು ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ದಿವ್ಯ ಹಾಗರಗಿ ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಇತರ ಬಿಜೆಪಿ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರೂ ಬಿಜೆಪಿ ಅದನ್ನು ನಿರಾಕರಿಸಿ ಲೋಕದ ಕಣ್ಣಿಗೆ ಸುಳ್ಳಿನ ಸುಣ್ಣ ಸುರಿದಿತ್ತು. ಪಿಎಸ್ಸೈ ಹಗರಣದ ಪ್ರಮುಖ ಆರೋಪಿ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ, ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದಾರೆ.

‘ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಪಿಎಸ್ಸೈ ಹಗರಣ, 545 ಪೊಲೀಸ್ ಸಬ್ ಇನ್ಸೆಕ್ಟರ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿತ್ತು. ಪಿಎಸ್ಸೈ ನೇಮಕಕ್ಕೆ ವರ್ಷಗಟ್ಟಲೆ ಶ್ರಮಪಟ್ಟು ಪರೀಕ್ಷೆ ಬರೆದ ಸಾವಿರಾರು ಯುವಕರಿಗೆ ಇದರಿಂದ ಅನ್ಯಾಯವಾಗುತ್ತಿತ್ತು. ಈ ಭ್ರಷ್ಟಾಚಾರದ ಸುಳಿವು ಸಿಗುತ್ತಿದಂತೆ ಪ್ರಿಯಾಂಕ್ ಖರ್ಗೆ ಅಂದು ನಾಡಿನ ಯುವಕರ ಪರ ನಿಂತು ಈ ಅಕ್ರಮದ ದಾಖಲೆ ಸಮೇತ ಹೋರಾಟ ನಡೆಸಿ ಅಕ್ರಮವನ್ನು ಬಯಲಿಗೆಳೆದಿದ್ದರು’

-ರಮೇಶ್ ಬಾಬು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ

‘ಬಿಜೆಪಿಯವರ ಹೆಗಲ ಮೇಲೆ ಕೇಸರಿ ಶಾಲು ಹೋಯ್ತು, ನೀಲಿ ಶಾಲು ಬಂತು. ನನಗೆ ಇದೊಂದು ವಿಶೇಷ ವಿಸ್ಮಯದಂತೆ ಭಾಸವಾಗುತ್ತಿದೆ. ‘ಅಂಬೇಡ್ಕರ್ ಮತ್ತು ಜೈಭೀಮ್ ಎನ್ನುವುದು ಫ್ಯಾಷನ್’ ಎಂದಿದ್ದ ಅಮಿತ್ ಶಾ ಬಿಜೆಪಿಗೆ, ನೀಲಿ ಶಾಲು ಧರಿಸುವುದು ಈಗ ಹೊಸ ‘ಫ್ಯಾಷನ್’ ಆಗಿದೆಯೇ? ಅಥವಾ ಕೇಸರಿ ಶಾಲಿನ ಮೇಲೆ ಬಿಜೆಪಿಗರಿಗೆ ಅಸಹನೆ ಉಂಟಾಗಿದೆಯೇ?. ಕೇಸರಿ ಶಾಲು ಕಂಡರೆ ನಿರ್ಲಕ್ಷ್ಯವೇ?. ಕೇಸರಿ ಶಾಲಿನಿಂದ ಸಂವಿಧಾನದ ಅನುಯಾಯಿಗಳನ್ನು ಎದುರಿಸಲು ಸಾಧ್ಯವಿಲ್ಲ ಎನ್ನುವುದು ಬಿಜೆಪಿಗೆ ಅರ್ಥವಾದಂತಿದೆ’

-ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಸಚಿವ

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News