"ನಿಮ್ಮವರ ನಾಚಿಕೆಗೇಡಿನ ಕೃತ್ಯಗಳ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆ ತೋರಿಸಿ" : ವಿಪಕ್ಷ ನಾಯಕ ಅಶೋಕ್‍ಗೆ ಪ್ರಿಯಾಂಕ್ ಖರ್ಗೆ ಸವಾಲು

Update: 2025-01-07 15:56 GMT

 ಪ್ರಿಯಾಂಕ್ ಖರ್ಗೆ

ಬೆಂಗಳೂರು : ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಣ್ಣ, ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಕಲಿತ ನಿಮ್ಮ ಅಪ್ರಸ್ತುತ ಪ್ರಶ್ನೆಗಳಿಗಿಂತ, ನಿಮ್ಮವರ ನಾಚಿಕೆಗೇಡಿನ ಕೃತ್ಯಗಳ ಪ್ರಸ್ತುತ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆ ತೋರಿಸಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ಮಂಗಳವಾರ ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಪ್ರಶ್ನೆ-1: ಯಡಿಯೂರಪ್ಪನವರಿಂದ ದೌರ್ಜನ್ಯಕ್ಕೊಳಗಾದ ಬಾಲಕಿ ಹಾಗೂ ಕುಟುಂಬ ಭವಿಷ್ಯದ ದಿಕ್ಕು ಕಾಣದೆ ಕಣ್ಣೀರಿನಲ್ಲಿ ಮುಳುಗಿದ್ದಾರೆ. ಮೊಮ್ಮಗಳ ವಯಸ್ಸಿನ ಮಗುವಿನ ಮೇಲೆ ಕೈ ಹಾಕಿದ ಯಡಿಯೂರಪ್ಪನವರ ಕೃತ್ಯಕ್ಕೆ ವಿಜಯೇಂದ್ರರನ್ನು ಹೊಣೆ ಮಾಡಿ ರಾಜೀನಾಮೆ ಕೇಳುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.

ಪ್ರಶ್ನೆ-2: ಏಡ್ಸ್ ಸೊಂಕನ್ನು ರಾಜಕೀಯ ವಿರೋಧಿಗಳಿಗೆ ಹಬ್ಬಿಸಲು ಪ್ರಯತ್ನಿಸಿದ್ದ ಹಾಗೂ ಹಲವು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಮುನಿರತ್ನರ ರಾಜೀನಾಮೆ ಪಡೆದು ಪಕ್ಷದಿಂದ ಹೊರಗಟ್ಟುವುದು ಯಾವಾಗ? ಅಶೋಕ್ ಅವರೇ, ನಿಮಗೇ ಏಡ್ಸ್ ಸೋಂಕು ತಗುಲಿಸಲು ಪ್ರಯತ್ನಿಸಿದ್ದರು ಎಂಬ ವಿಚಾರ ನೆನಪಿದೆ ತಾನೇ? ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.

ಪ್ರಶ್ನೆ-3: ಮಹಿಳೆಯರ ಮೇಲೆ ಅತ್ಯಾಚಾರ ಎಸಗುವುದು, ದೌರ್ಜನ್ಯ ನಡೆಸುವುದು ನಿಮ್ಮ ಪಕ್ಷದವರ ಬೇಸಿಕ್ ಕ್ವಾಲಿಫಿಕೇಶನ್ ಇರಬಹುದೇನೋ ಎಂಬ ಪ್ರಶ್ನೆ ಮೂಡುತ್ತಿದೆ, ಏಕೆಂದರೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಅತಿ ಹೆಚ್ಚು ಜನ ನಿಮ್ಮ ಪಕ್ಷದಲ್ಲೇ ಇರುವುದು. ಈಗ ಹೊಸದಾಗಿ ಬಿಜೆಪಿ ಮುಖಂಡ ಹಾಗೂ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯೊಬ್ಬನ ಅತ್ಯಾಚಾರದ ವಿಷಯ ಹೊರಬಂದಿದೆ. ಅಶೋಕ್ ಅವರೇ, ಈ ನಾಡಿನ ಮಹಿಳೆಯರಲ್ಲಿ ನಿಮ್ಮ ಪಕ್ಷ ಕ್ಷಮೆ ಕೇಳುವುದು ಯಾವಾಗ? ಎಂದು ಅವರು ಪ್ರಶ್ನಿಸಿದ್ದಾರೆ.

ಮಹಿಳೆಯರ ಮಾನದ ಮೇಲೆ ಪ್ರಹಾರ ನಡೆಸುವುದೇ ನಕಲಿ ಧರ್ಮ ರಕ್ಷಕರ ಅಸಲಿ ಕೃತ್ಯವಾಗಿದೆ, ಅಲ್ಲವೇ ಅಶೋಕ್ ಅವರೇ? ಕೇಸರಿ ಶಾಲಿನ ಮರೆಯಲ್ಲಿ ನಿಮ್ಮೆಲ್ಲ ಕುಕೃತ್ಯಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಆಧುನಿಕ ದುಷ್ಯಸನರೇ ತುಂಬಿರುವ ಬಿಜೆಪಿಯಿಂದ ಧರ್ಮ, ಸಂಸ್ಕೃತಿ, ಪರಂಪರೆಯ ಮಾತುಗಳನ್ನು ಕೇಳುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News