ಆಯವ್ಯಯದಲ್ಲಿ ಶೇ.55.69ರಷ್ಟು ಮಾತ್ರ ವ್ಯಯ : ಆರ್.ಅಶೋಕ್ ಆರೋಪ

Update: 2025-01-07 16:06 GMT

ಆರ್.ಅಶೋಕ್

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‍ನಲ್ಲಿ ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ. ಬಜೆಟ್‍ನ 3.22ಲಕ್ಷ ಕೋಟಿ ರೂ.ನಲ್ಲಿ 1.79ಲಕ್ಷ ಕೋಟಿ ರೂ., ಅಂದರೆ ಶೇ.55.69ರಷ್ಟು ಮಾತ್ರ ಖರ್ಚಾಗಿದೆ. ಇನ್ನೂ ಶೇ.45ರಷ್ಟು ಅನ್ನು ಎರಡು ತಿಂಗಳಲ್ಲಿ ಖರ್ಚು ಮಾಡಬೇಕಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹರಿಹಾಯ್ದಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್‍ಸಿಎಸ್‍ಪಿಯಲ್ಲಿ 28,527 ಕೋಟಿ ರೂ. ಇದ್ದರೆ, 13,923 ಕೋಟಿ ರೂ. ಅಂದರೆ ಶೇ.48.81ರಷ್ಟು ಖರ್ಚು ಮಾಡಲಾಗಿದೆ. ಟಿಎಸ್‍ಪಿಯಲ್ಲಿ 11,515.39 ಕೋಟಿ ರೂ. ಇದ್ದರೆ, 4,937.59 ಕೋಟಿ ರೂ. ಅಂದರೆ ಶೇ.42.88ರಷ್ಟು ಖರ್ಚಾಗಿದೆ. ವಿಶೇಷ ಅಭಿವೃದ್ಧಿ ಯೋಜನೆಯಡಿ, 3,077 ಕೋಟಿ ರೂ. ಇದ್ದರೆ 1,076 ಕೋಟಿ ರೂ. ಅಂದರೆ ಶೇ.34ರಷ್ಟು ಖರ್ಚಾಗಿದೆ. ನುಡಿದಂತೆ ನಡೆದಿದ್ದೇವೆ ಎಂದು ಹೇಳಿ ಯಾವುದೇ ಅನುದಾನ ಖರ್ಚು ಮಾಡಿಲ್ಲ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಗೆ 2022-23ರಲ್ಲಿ ಬಿಜೆಪಿ ಸರಕಾರ 60 ಕೋಟಿ ರೂ. ಅನುದಾನ ನೀಡಿತ್ತು. 2024-25ರಲ್ಲಿ ಕಾಂಗ್ರೆಸ್ 40 ಕೋಟಿ ರೂ. ನೀಡಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 45 ಕೋಟಿ ರೂ. ನೀಡಿದೆ. ತಾಂಡಾ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 110 ಕೋಟಿ ರೂ. ನೀಡಿದರೆ ಕಾಂಗ್ರೆಸ್ 60 ಕೋಟಿ ರೂ. ನೀಡಿದೆ ಎಂದು ಆರ್.ಅಶೋಕ್ ವಿವರಿಸಿದರು.

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 50 ಕೋಟಿ ರೂ. ನೀಡಿದೆ. ಭೋವಿ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 95 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 55 ಕೋಟಿ ರೂ. ನೀಡಿದೆ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 190 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್ 100 ಕೋಟಿ ರೂ. ನೀಡಿದೆ. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 25 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 13 ಕೋಟಿ ರೂ.ಗೆ ಇಳಿಸಿದೆ ಎಂದು ಆರ್.ಅಶೋಕ್ ತಿಳಿಸಿದರು.

ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಜೆಪಿ 106 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್ 50.10 ಕೋಟಿ ರೂ. ನೀಡಿದೆ. ನಿಜಶರಣ ಅಂಬಿಗರ ಚೌಡಯ್ಯ ನಿಗಮಕ್ಕೆ ಬಿಜೆಪಿ 25 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 5 ಕೋಟಿ ರೂ. ನೀಡಿದೆ. ಉಪ್ಪಾರ ನಿಗಮಕ್ಕೆ ಬಿಜೆಪಿ 15 ಕೋಟಿ ರೂ. ನೀಡಿದರೆ ಕಾಂಗ್ರೆಸ್ 8 ಕೋಟಿ ರೂ. ನೀಡಿದೆ. ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 100 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್ 60 ಕೋಟಿ ರೂ.ಗೆ ರಿಯಾಯಿತಿ ಮಾಡಿದೆ ಎಂದು ಆರ್.ಅಶೋಕ್ ಹೇಳಿದರು.

ದೇವಾಲಯಗಳು ಮತ್ತು ಇತರೆ ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ಬಿಜೆಪಿ 274.68 ಕೋಟಿ ರೂ. ನೀಡಿದರೆ, ಕಾಂಗ್ರೆಸ್ ಕೇವಲ 17.50 ಕೋಟಿ ರೂ. ನೀಡಿದೆ. ವಿವಿಧ ಮಠ ಹಾಗೂ ದೇವಾಲಯಗಳಿಗೆ ಮುಖ್ಯಮಂತ್ರಿಗಳ ವಿಶೇಷ ಸಹಾಯಧನದಡಿ ಬಿಜೆಪಿ 154.85 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 30 ಕೋಟಿ ರೂ. ನೀಡಿ ಅನ್ನಕ್ಕೂ ಕನ್ನ ಹಾಕಿದೆ ಎಂದು ಆರ್.ಅಶೋಕ್ ದೂರಿದರು.

ಹಿಂದೂ ರುದ್ರಭೂಮಿಗಳ ನಿರ್ವಹಣೆಗೆ ಬಿಜೆಪಿ 25 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 10 ಕೋಟಿ ರೂ.ಗೆ ಇಳಿಸಿದೆ. ನೇಕಾರರ ಯೋಜನೆಗೆ ಬಿಜೆಪಿ 125 ಕೋಟಿ ರೂ. ಕೊಟ್ಟರೆ, ಕಾಂಗ್ರೆಸ್ 10 ಕೋಟಿ ರೂ. ಕೊಟ್ಟಿದೆ. ಕಮಿಷನ್ ದಂಧೆಗಾಗಿ ಸರಕಾರ ಇಡೀ ರಾಜ್ಯವನ್ನು ಕತ್ತಲೆಗೆ ದೂಡಿದೆ ಎಂದು ಆರ್.ಅಶೋಕ್ ಹೇಳಿದರು.

ನಾನು ಸಚಿವನಾಗಿದ್ದಾಗ ಸಾರಿಗೆ ನಿಗಮಗಳ ನಷ್ಟಕ್ಕೆ ದೂಡಲಿಲ್ಲ: ನಾನು ಸಚಿವನಾಗಿದ್ದಾಗ ಸಾರಿಗೆ ನಿಗಮಗಳನ್ನು ನಷ್ಟಕ್ಕೆ ದೂಡಲಿಲ್ಲ. ನಾನು ಸಾರಿಗೆ ಸಚಿವನಾಗಿದ್ದಾಗ ಎಲ್ಲ ಕಡೆ ಬಸ್ ನಿಲ್ದಾಣ ನಿರ್ಮಿಸಿ ಬಾಡಿಗೆ ಮೂಲಕ ಆದಾಯ ಬರುವಂತೆ ಮಾಡಲಾಗಿತ್ತು. ಈಗ ಸರಕಾರ ಎಲ್ಲೂ ನಿಲ್ದಾಣ ನಿರ್ಮಿಸಿಲ್ಲ. ನಾನು ಸಚಿವ ಸ್ಥಾನದಿಂದ ಹೊರಬಂದಾಗ ಬಿಎಂಟಿಸಿ ಲಾಭದಲ್ಲಿತ್ತು. ಕೋವಿಡ್ ಸಮಯದಲ್ಲಿ ಆರ್ಥಿಕ ನಷ್ಟವಾಗಿದ್ದಾಗಲೂ ಟಿಕೆಟ್ ದರ ಏರಿಸಲಿಲ್ಲ. ಗ್ಯಾರಂಟಿಗಳಿಂದಾಗಿ ಈಗ ಟಿಕೆಟ್ ದರ ಏರಿಸಿದ್ದಾರೆ ಎಂದು ಆರ್.ಅಶೋಕ್ ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News