ಎಸ್‍ಸಿ-ಎಸ್‍ಟಿ ಮುಖಂಡರ ಸಭೆ ಮುಂದೂಡಿಕೆ: ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು : ಕಾಂಗ್ರೆಸ್ ಪಕ್ಷದ ಎಸ್ಸಿ, ಎಸ್ಟಿ ಸಮುದಾಯದ ಶಾಸಕರು, ಸಚಿವರು, ಸಂಸದರು ಹಾಗೂ ಮುಖಂಡರ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ(ಜ.8) ಬೆಂಗಳೂರಿನ ಅರಮನೆ ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ಕಾಂಗ್ರೆಸ್ ಪಕ್ಷದ ಎಸ್ಸಿ, ಎಸ್ಟಿ ಸಮುದಾಯದ ಶಾಸಕರು, ಸಚಿವರು, ಸಂಸದರು ಹಾಗೂ ಮುಖಂಡರ ಸಭೆಯನ್ನು ಏರ್ಪಡಿಸಲಾಗಿತ್ತು. ಆದರೆ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೂಚನೆ ಮೇರೆಗೆ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ, ಇದಕ್ಕೂ ಮೊದಲು ಪ್ರತಿಕ್ರಿಯಿಸಿದ್ದ ಪರಮೇಶ್ವರ್, ಪಕ್ಷದ ವ್ಯಾಪ್ತಿಯಲ್ಲಿಯೇ ಅನುಮತಿ ಪಡೆದು ಸಭೆ ನಡೆಸಲಾಗುತ್ತಿದೆ. ಅಲ್ಲದೆ, ಈ ಹಿಂದೆ ಚಿತ್ರದುರ್ಗದಲ್ಲಿ ಎಸ್ಸಿ, ಎಸ್ಟಿ ಸಮಾವೇಶದಲ್ಲಿ ಕೆಲವು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅದರ ಬಗ್ಗೆಯೂ ಬುಧವಾರ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದರು.