ಎಚ್‌ಡಿಕೆ ಕುಟುಂಬದಿಂದ ಭೂ ಒತ್ತುವರಿ ಆರೋಪ : ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಜರಾಗಲು ಹೈಕೋರ್ಟ್ ಸೂಚನೆ
ಬೆಂಗಳೂರು : ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ 14 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಆರೋಪದ ಪ್ರಕರಣಕ್ಕೆ ವಿವರಣೆ ನೀಡಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಿಗೆ ಹೈಕೋರ್ಟ್ ಆದೇಶಿಸಿದೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಸೇರಿದಂತೆ ಇತರರ ವಿರುದ್ದದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಜನವರಿ 29 ರಂದು ಖುದ್ದು ಹಾಜರಾಗಲು ಸೂಚನೆ ನೀಡಿ ಆದೇಶಿದೆ.
ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿರಣ್ ವಿ.ರೋಣ ಹಾಜರಾಗಿ, ಈಗಾಗಲೇ ಕೋರ್ಟ್ ಗೆ ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಲಾಗಿದೆ. ಅಲ್ಲದೆ ಸರ್ಕಾರ ಕೈಗೊಳ್ಳುವ ಕ್ರಮಗಳನ್ನು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ. ಅಂತೆಯೇ ಈ ಪ್ರಮಾಣ ಪತ್ರದ ಅನುಸಾರ ಸರ್ಕಾರದ ಕ್ರಮವನ್ನು ಮಾನ್ಯ ಮಾಡುವಂತೆ ಮನವಿ ಮಾಡಿದರು. ಈ ವೇಳೆ ದೂರುದಾರ ಸಮಾಜ ಪರಿವರ್ತನಾ ಸಮುದಾಯದ ಪರ ಹಿರಿಯ ವಕೀಲ ಎಸ್.ಬಸವರಾಜ್ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗಿಂತಲೂ ಸ್ಥಳೀಯ ತಹಶಿಲ್ದಾರ್ ಮತ್ತು ಅಧಿಕಾರಿಗಳನ್ನು ಕರೆಸಿ ವಿವರಣೆ ಪಡೆಯುವಂತೆ ಮನವಿ ಮಾಡಿದರು.
ಈ ವೇಳೆ ಸರ್ಕಾರ ಪರ ವಕೀಲರು ಕಿರಣ್ ರೋಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ಕೋರ್ಟ್ ಗೆ ಈ ರೀತಿ ನಿರ್ದೇಶನ ನೀಡಲು ಅವಕಾಶವಿಲ್ಲವೆಂದು ವಾದಿಸಿದರು.ವಾದ ಆಲಿಸಿದ ನ್ಯಾಯಪೀಠ ಮೇಲಿನ ಆದೇಶ ನೀಡಿದೆ.