ಅರಣ್ಯ ಒತ್ತುವರಿ, ಕಳ್ಳಬೇಟೆ ತಡೆಗೆ ‘ಗರುಡಾಕ್ಷಿ’ ಅಸ್ತ್ರ : ಈಶ್ವರ್ ಖಂಡ್ರೆ

Update: 2025-01-07 16:01 GMT

ಬೆಂಗಳೂರು : ಆಧುನಿಕ ಯುಗಮಾನದ ಅಗತ್ಯಕ್ಕೆ ಅನುಗುಣವಾಗಿ ಅರಣ್ಯ ಇಲಾಖೆ ಬದಲಾಗುತ್ತಿದ್ದು, ಅರಣ್ಯ ಒತ್ತುವರಿ, ಅಕ್ರಮ ಮರ ಕಡಿತಲೆ, ಕಳ್ಳಬೇಟೆ, ಅತಿಕ್ರಮ ಪ್ರವೇಶ ಇತ್ಯಾದಿ ಅರಣ್ಯ ಅಪರಾಧಗಳಿಗೆ ಇನ್ನು ಮುಂದೆ ಗರುಡಾಕ್ಷಿ ಅಸ್ತ್ರ ಪ್ರಯೋಗಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಅರಣ್ಯ ಇಲಾಖೆಯು ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ (ಡಬ್ಲ್ಯೂಟಿಐ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಗರುಡಾಕ್ಷಿ ಆನ್‍ಲೈನ್/ಡಿಜಿಟಲ್ ಎಫ್‍ಐಆರ್ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅರಣ್ಯ ಅಪರಾಧ ತಡೆಯಲು, ತಪ್ಪಿತಸ್ಥರಿಗೆ ಶಿಕ್ಷೆ ಆಗುವುದನ್ನು ಖಾತ್ರಿ ಪಡಿಸಲು ಹಾಗೂ ಆ ಮೂಲಕ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ಇಲಾಖೆಯಲ್ಲಿ ಹಂತ ಹಂತವಾಗಿ ಸುಧಾರಣೆ ತರುತ್ತಿದ್ದು, ಪೊಲೀಸ್ ಇಲಾಖೆಯಲ್ಲಿರುವ ರೀತಿಯಲ್ಲೇ ಅರಣ್ಯ ಇಲಾಖೆಯಲ್ಲೂ ಆನ್‍ಲೈನ್ ಎಫ್‍ಐಆರ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ತಂತ್ರಾಂಶ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾನೂನುಗಳ ಅಡಿಯಲ್ಲಿ ಅರಣ್ಯ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು ಮತ್ತು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಸಹಕಾರಿಯಾಗಲಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು

ಪ್ರಸಕ್ತ ಗರುಡಾಕ್ಷಿ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಬೆಂಗಳೂರು ನಗರ ವಿಭಾಗ, ಬೆಂಗಳೂರು ಅರಣ್ಯ ಸಂಚಾರಿ ದಳ ವಿಭಾಗ, ಭದ್ರಾವತಿ ವಿಭಾಗ, ಶಿರಸಿ ವಿಭಾಗ ಮತ್ತು ಮಲೈಮಹದೇಶ್ವರ ವನ್ಯ ಜೀವಿ ವಿಭಾಗಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ. ಈ ತಂತ್ರಾಂಶದ ಕಾರ್ಯನಿರ್ವಹಣೆಯ ಬಗ್ಗೆ ಕ್ಷೇತ್ರ ಮಟ್ಟದ ಪ್ರತಿಕ್ರಿಯೆ ಆಧಾರದ ಮೇಲೆ ಇನ್ನೂ ಹೆಚ್ಚು ಕ್ರಿಯಾಶೀಲಗೊಳಿಸಿ ಹಂತ ಹಂತವಾಗಿ ರಾಜ್ಯದ ಎಲ್ಲ ವಿಭಾಗಕ್ಕೂ ವಿಸ್ತರಿಸಲಾಗುವುದು ಎಂದು ಈಶ್ವರ್ ಖಂಡ್ರೆ ಹೇಳಿದರು.

ಗರುಡಾಕ್ಷಿ ಆನ್‍ಲೈನ್ ಎಫ್‍ಐಆರ್ ವ್ಯವಸ್ಥೆ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳ ನಿರ್ವಹಣೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದ್ದು, ಪಾರದರ್ಶಕ, ಸುವ್ಯವಸ್ಥಿತ, ಪರಿಹಾರವಾಗಿ ಅರಣ್ಯ ಅಪರಾಧ ತಡೆಯಲು ಇಲಾಖೆಗೆ ಬಲ ತುಂಬುತ್ತದೆ. ಇನ್ನು ಮುಂದೆ ಎಫ್‍ಐಆರ್ ಅನ್ನೂ ಗರುಡಾಕ್ಷಿ ತಂತ್ರಾಂಶದ ಮೂಲಕವೇ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ಅರಣ್ಯ ಭೂಮಿ ಒತ್ತುವರಿ, ಅಕ್ರಮ ಮರ ಕಡಿತಲೆ, ವನ್ಯಜೀವಿಗಳ ಅಕ್ರಮ ಬೇಟೆಗೆ ಸಂಬಂಧಿಸಿದಂತೆ ಆನ್‍ಲೈನ್ ಎಫ್‍ಐಆರ್ ಹಾಕಿದರೆ, ಚಾರ್ಜ್ ಶೀಟ್ ಹಾಕಲೇ ಬೇಕಾಗುತ್ತದೆ. ಲಾಂಗ್ ಪೆಂಡೆನ್ಸಿ ಇರಲು ಸಾಧ್ಯವಿಲ್ಲ. ಈ ಬಗ್ಗೆ ಹೈಕೋರ್ಟ್ ಕೂಡ ಸೂಚನೆ ನೀಡುತ್ತದೆ. ಇದರಿಂದ ಭೂ ಕಬಳಿಕೆದಾರರಿಗೆ ಶಿಕ್ಷೆ ಆಗುತ್ತದೆ. ಹೀಗಾಗಿ ಅರಣ್ಯ ಅಪರಾಧಗಳ ಸಂಖ್ಯೆ ಗಣನೀಯವಾಗಿ ತಗ್ಗುತ್ತದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪ್ರವೇಜ್, ಅರಣ್ಯಪಡೆ ಮುಖ್ಯಸ್ಥರು ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ದೀಕ್ಷಿತ್, ವನ್ಯ ಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್‌ ಮಾಲ್ಕಡೆ ಮತ್ತಿತರರು ಹಾಜರಿದ್ದರು.

ಅಪರಾಧಿಗಳಿಗೆ ಶಿಕ್ಷೆ ಖಚಿತ :

ಅರಣ್ಯ ಅಪರಾಧ ಕುರಿತಂತೆ ದೂರು ಕೊಟ್ಟವರಿಗೆ ಎಫ್‍ಐಆರ್ ಪ್ರತಿ ಲಭಿಸಲಿದೆ, ಜೊತೆಗೆ ಜಾರ್ಜ್‍ಶೀಟ್ ಹಾಕಲಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಅವಕಾಶ ಆಗುತ್ತದೆ. ಚಾರ್ಜ್ ಶೀಟ್ ಸಲ್ಲಿಕೆ ಆದ ಕೂಡಲೇ ನ್ಯಾಯಾಲಯದಲ್ಲಿ ಅಪರಾಧ ಸಂಖ್ಯೆ(ಸಿಸಿ-ನಂಬರ್) ದಾಖಲಾಗುತ್ತದೆ, ವಿಚಾರಣೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದು ಈಶ್ವರ್ ಖಂಡ್ರೆ ವಿವರಿಸಿದರು.

ಗರುಡಾಕ್ಷಿ ತಂತ್ರಾಂಶದ ಪ್ರಯೋಜನವೇನು..?

ಗರುಡಾಕ್ಷಿ ತಂತ್ರಾಂಶದಲ್ಲಿ ಪ್ರಕರಣಗಳ ದಾಖಲಿಸುವಿಕೆ, ತನಿಖೆ ಮತ್ತು ಅಂತಿಮ ನಿರ್ಣಯದವರೆಗಿನ ಪ್ರತಿ ಹಂತವನ್ನು ನಿರ್ವಹಿಸಲು ಆಸ್ಪದ ಕಲ್ಪಿಸಲಾಗಿದ್ದು, ಪ್ರಕರಣಗಳ ನಿರ್ವಹಣೆಗೆ ಸಂಬಂಧಿಸಿದ ಪ್ರಗತಿಯನ್ನು ಉಸ್ತುವಾರಿ ಮಾಡಲು ಸಹಕಾರಿಯಾಗಿರುತ್ತದೆ. ಪ್ರಕರಣಗಳ ನಿರ್ವಹಣೆಯಲ್ಲಿ ದಾಖಲಿಸಬೇಕಿರುವ ಮತ್ತು ಸಲ್ಲಿಸಬೇಕಿರುವ ವಿವಿಧ ವರದಿ ಮತ್ತು ನಮೂನೆಗಳನ್ನು ಈ ತಂತ್ರಾಂಶದಲ್ಲಿ ಸ್ವಯಂ ಸೃಜನೆಗೊಳ್ಳುವಂತೆ ಅಭಿವೃದ್ಧಿಪಡಿಸಲಾಗಿದ್ದು, ಅಧಿಕಾರಿಗಳು ತ್ವರಿತವಾಗಿ, ವಿಳಂಬವಿಲ್ಲದೇ ಕಾರ್ಯ ನಿರ್ವಹಿಸಲು ಅನುವು ಮಾಡಿರುತ್ತದೆ. ಈ ಬಳಕೆದಾರ-ಸ್ನೇಹಿ ಉಪಕ್ರಮವು ಅರಣ್ಯ ಕಾನೂನು ಜಾರಿ ಮತ್ತು ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ಟ್ರ್ಯಾಕಿಂಗ್ ಮಾಡಲು ಅವಕಾಶವಿರುವ ಸಿಸ್ಟಮ್ ಆಗಿದ್ದು ಇಲಾಖೆಯ ಕಾರ್ಯಾಚರಣೆಗಳನ್ನು ಆಧುನೀಕರಿಸಲು ಮತ್ತು ಉತ್ತಮಗೊಳಿಸಲು ಹೆಚ್ಚು ಪರಿಣಾಮಕಾರಿಯಾದ ಪರಿಹಾರವಾಗಿದೆ ಎಂದು ಈಶ್ವರ್ ಖಂಡ್ರೆ ವಿವರಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News