ಅಕ್ರಮ ಆಸ್ತಿಗಳಿಕೆ ಆರೋಪ : ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ, ಪರಿಶೀಲನೆ
ಬೆಂಗಳೂರು : ಅಕ್ರಮ ಆಸ್ತಿಗಳಿಕೆ ಆರೋಪದಡಿ ಹಲವು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಇಲಾಖೆಯ 8 ಮಂದಿ ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಬುಧವಾರ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು, ಚಿಕ್ಕಮಗಳೂರು, ಬೀದರ್, ಬೆಳಗಾವಿ, ತುಮಕೂರು, ಗದಗ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಚೇರಿ ಹಾಗೂ ಫಾರ್ಮ್‍ಹೌಸ್‍ಗಳಲ್ಲಿ ಲೋಕಾಯುಕ್ತ ಪೊಲೀಸರು ನಗದು, ಚಿನ್ನಾಭರಣ ಹಾಗೂ ಆಸ್ತಿ ಪತ್ರಗಳ ವಶಕ್ಕೆ ಪಡೆದು ಪರಿಶೀಲನೆ ಕಾರ್ಯ ಕೈಗೊಂಡರು.
ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾ, ಚಿಕ್ಕಮಗಳೂರು ಜಿಲ್ಲೆ ಕಡೂರಿನ ಆಡಳಿತ ವೈದ್ಯಾಧಿಕಾರಿ ಡಾ.ಎಸ್.ಎನ್.ಉಮೇಶ್, ಬೀದರ್ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರವೀಂದ್ರ, ಬೆಳಗಾವಿಯ ಖಾನಾಪುರದ ತಹಶೀಲ್ದಾರ್ ಪ್ರಕಾಶ್ ಶ್ರೀಧರ್ ಗಾಯಕ್ವಾಡ್, ಗದಗ-ಬೆಟಗೇರಿ ಪುರಸಭೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುಚ್ಚೇಶ್ ಬಂಡಿವಡ್ಡರ್, ರಾಯಚೂರು ಜಿಲ್ಲೆಯ ಬೆಸ್ಕಾಂ ಕಿರಿಯ ಇಂಜಿನಿಯರ್ ಹುಲಿರಾಜ್, ಬಳ್ಳಾರಿಯ ಹಿಂದುಳಿದ ವರ್ಗಗಳ ಇಲಾಖೆ ಕಲ್ಯಾಣಾಧಿಕಾರಿ ಆರ್.ಎಚ್.ಲೋಕೇಶ್ ಹಾಗೂ ತುಮಕೂರಿನ ನಿವೃತ್ತ ಆರ್‍ಟಿಒ ಅಧಿಕಾರಿ ಎಸ್.ರಾಜು ಅವರುಗಳ ನಿವಾಸ ಮತ್ತು ಕಚೇರಿಗಳ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದರು.
ಅಧಿಕಾರಿಗಳ ಸಂಬಂಧಿಕರು ಹಾಗೂ ಸ್ನೇಹಿತರ ನಿವಾಸದ ಮೇಲೂ ಅಧಿಕಾರಿಗಳು ದಾಳಿ ಕೈಗೊಂಡರು. ಒಟ್ಟಾರೆ ದಾಳಿಯಲ್ಲಿ ಚಿನ್ನಾಭರಣ, ನಗದು ಮತ್ತು ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದರು.