ಶಿಕ್ಷಣ ವ್ಯವಸ್ಥೆ ಬಲವರ್ಧನೆಗೆ ಅಗತ್ಯ ಅನುದಾನ ನೀಡಿ : ಪ್ರೊ.ನಿರಂಜನಾರಾಧ್ಯ ವಿ.ಪಿ.

Update: 2025-01-09 12:20 GMT

ಬೆಂಗಳೂರು : ಮುಂದಿನ ಆಯವ್ಯಯದಲ್ಲಿ ಸರಕಾರಿ ಶಾಲೆಗಳ ಸಬಲೀಕರಣದ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲು ಅಗತ್ಯ ಅನುದಾನಗಳನ್ನು ಒದಗಿಸಬೇಕು ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ.ಪಿ. ಒತ್ತಾಯಿಸಿದ್ದಾರೆ.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸಿದಾಗ ಮಾತ್ರ ಸಮಾನತೆಯ ಆಶಯ ಈಡೇರಲು ಸಾಧ್ಯ. ಜೊತೆಗೆ ಗುಣಾತ್ಮಕ ಸಮಾನ ಶಿಕ್ಷಣ ಮಾತ್ರ ಕೆಳಸ್ಥರದ ಬಡ ಮಕ್ಕಳ ಭವಿಷ್ಯಕ್ಕೆ ಸಂಜೀವಿನಿಯಾಗಿ ಕೆಲಸ ಮಾಡಬಲ್ಲದು ಎಂದಿದ್ದಾರೆ.

ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ಮೂಲಕ ಪ್ರತಿಯೊಂದು ಶಾಲೆಯನ್ನು ನೆರೆಹೊರೆಯ ಸಮಾನ ಶಾಲೆಯನ್ನಾಗಿ ಪರಿವರ್ತಿಸಿ ಎಲ್ಲ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂಬ ಕೂಗು ರಾಜ್ಯದಲ್ಲಿ ಹಲವು ದಶಕಗಳಿಂದ ಕೇಳಿಬರುತ್ತಿದೆ. ಈ ಹಿಂದೆಯೂ ತಾವು ಈ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೀರಿ. ಮತ್ತೊಮ್ಮೆ ಶಾಲಾ ಶಿಕ್ಷಣ ವಲಯವನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಿ, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮೊಟ್ಟ ಮೊದಲನೆಯದಾಗಿ ರಾಜ್ಯದಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬುವ ಬಗ್ಗೆ ಬಜೆಟ್ ನಲ್ಲಿ ಘೋಷಿಸಿ ಹಣ ಮೀಸಲೀಡಬೇಕು. ⁠ನಾಲ್ಕು ವರ್ಷದಿಂದ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಸಿದ ಕಾರಣ ನೂರಾರು ಮಕ್ಕಳು, ವಿಶೇಷವಾಗಿ ಹೆಣ್ಣು ಮಕ್ಕಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಉಚಿತ ಬೈಸಿಕಲ್ ವಿತರಣೆಗೆ ಆಯವ್ಯದಲ್ಲಿ ಅಗತ್ಯ ಅನುದಾನ ನೀಡಬೇಕು ಎಂದು ನಿರಂಜನಾರಾಧ್ಯ ವಿ.ಪಿ. ತಿಳಿಸಿದ್ದಾರೆ.

⁠ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ನಿರ್ಧಿಷ್ಟ ಮಧ್ಯ ಪ್ರವೇಶಿಕೆಗಳನ್ನು ರೂಪಿಸಲು ಬಜೆಟ್‍ನಲ್ಲಿ ವಿಶೇಷ ಅನುದಾನ ಒದಗಿಸಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿಸ್ತೃತ ಸಂಶೋಧನೆಯ ಮೂಲಕ ‘ಸರಕಾರಿ ಶಾಲೆಗಳ ಸಬಲೀಕರಣ ವರದಿ’ಯನ್ನು 2017ರಲ್ಲಿ ಸಲ್ಲಿಸಿತ್ತು. ಮುಂದಿನ ಬಜೆಟ್ ಅಧಿವೇಶನದಲ್ಲಿ ಈ ವರದಿಯನ್ನು ಸದನದಲ್ಲಿ ಅಂಗೀಕರಿಸಿ ಪೂರ್ಣವಾಗಿ ಜಾರಿಗೊಳಿಸಲು ಆಯವ್ಯಯದಲ್ಲಿ ಹಣ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News